ವಿಜಯಪುರ: ಶ್ರೀ ಕೃಷ್ಣನ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಕೃಷ್ಣನ ಜೀವನ ಸಂದೇಶವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣನ ಸಂದೇಶಗಳು ನಮಗೆಲ್ಲ ದಾರಿ ದೀಪವಾಗಿವೆ. ಅವರ ಆದರ್ಶ ವಿಚಾರಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಮಕ್ಕಳನ್ನು ಆದರ್ಶ ವ್ಯಕ್ತಿಯಾಗಿ ರೂಪಿಸಬೇಕು. ಮಕ್ಕಳು ಜ್ಞಾನಾರ್ಜನೆಗಾಗಿ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀಕೃಷ್ಣನ ಕೌಶಲ, ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ, ಆದರ್ಶ, ಸ್ನೇಹ, ಸಹನೆ, ತಾಳ್ಮೆಯಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ, ಸ್ನೇಹಕ್ಕೆ ನೀಡಿದ ಮಹತ್ವ, ಯಾವ ಬೇಧ ಭಾವಗಳಿಲ್ಲದ ಅಪರೂಪದ ವ್ಯಕ್ತಿತ್ವ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಪ್ರೊ.ಯು.ಎನ್.ಕುಟೋಜಿ, ಯುದ್ಧ ನೀತಿಯ ನಿಪುಣ, ಚಿಂತಕ, ಈ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಶ್ರೀ ಕೃಷ್ಣ ಅವರ ಆದರ್ಶ ವಿಚಾರಗಳು, ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಅವರು ಹೇಳಿದರು.
ವೈದೇಹಿ ವಿ.ಕಟ್ಟಿ ಅವರು ಸುಗಮ ಸಂಗೀತ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುಳಗುಂದ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಮಹಾನಗರ ಪಾಲಿಕೆ ಉಪ ಆಯುಕ್ತ ವೈ.ಎಚ್.ನಾರಾಯಣಕರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅಲ್ತಾಫ್ ಮಣಿಯಾರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ, ಸಮಾಜದ ಮುಖಂಡ ದುರ್ಗಪ್ಪವ ಉಪಸ್ಥಿತರಿದ್ದರು.
ಶ್ರೀ ಕೃಷ್ಣನ ಆದರ್ಶಗಳು ಮನೆ ಮನ ಬೆಳಗುವಂತಾಗಲಿ ಮಕ್ಕಳಿಗೆ ಶ್ರೀಕೃಷ್ಣನ ಆದರ್ಶಗಳನ್ನು ಪಾಲಕರು ತಿಳಿಸಿಕೊಡಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.