ಬಸವನಬಾಗೇವಾಡಿ: ಮಹಾರಾಷ್ಟ್ರ ಭಾಗದ ಜಾನುವಾರುಗಳಿಗೆ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಜಿಲ್ಲೆಯ ಮಹಾರಾಷ್ಟ್ರ ಗಡಿ ತಾಲ್ಲೂಕುಗಳಾದ ಇಂಡಿ, ಚಡಚಣ ಸೇರಿದಂತೆ ಬಸವನಬಾಗೇವಾಡಿ ಹಾಗೂ ವಿಜಯಪುರ ತಾಲ್ಲೂಕು ವ್ಯಾಪ್ತಿಗಳ ರಾಸುಗಳಲ್ಲೂ ಕಾಣಿಸಿಕೊಂಡಿದೆ.
ಮೂರು ದಿನಗಳಲ್ಲಿ ವಿಜಯಪುರ ತಾಲ್ಲೂಕಿನ ದ್ಯಾಬೇರಿಯ ರೈತ ತುಕಾರಾಮ ಕದಂಬ ಎಂಬುವರ ಹೋರಿ ಹಾಗೂ ಆಹೇರಿ ಗ್ರಾಮದ ಪ್ರಗತಿಪರ ರೈತ ಕೃಷ್ಣಾ ಬೋಸ್ಲೆ ಅವರ ನಾಲ್ಕು ತಿಂಗಳ ಕರು ಚರ್ಮಗಂಟು ರೋಗದಿಂದ ನರಳಾಡಿ ಅಸುನೀಗಿವೆ.
‘ನಮ್ಮ ನಾಲ್ಕು ತಿಂಗಳ ಕರು ವಾರದಿಂದ ಚರ್ಮಗಂಟು ರೋಗದಿಂದ ತೀವ್ರ ಬಳಲುತಿತ್ತು. ಸ್ಥಳೀಯ ವೈದ್ಯರು ಬಂದು ಕರುವಿಗೆ ಲಸಿಕೆ ನೀಡಿದರು. ಆದರೆ, ಎಷ್ಟೇ ಪ್ರಯತ್ನಿಸಿದರೂ ಕರುವನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ರೈತ ಕೃಷ್ಣಾ ಬೋಸ್ಲೆ ತಿಳಿಸಿದರು.
‘ವಾರದಿಂದ ನಮ್ಮ ಆಕಳಿಗೆ ಚರ್ಮಗಂಟು ರೋಗ ತಗುಲಿದೆ. ಲಸಿಕೆ ನೀಡಿದ ಬಳಿಕ ಮೇವು ತಿನ್ನುತಿದ್ದು, ಚಿಕಿತ್ಸೆ ಮುಂದುವರೆದಿದೆ’ ಎಂದು ಬಸವನಬಾಗೇವಾಡಿಯ ರೈತ ರಾಚಪ್ಪ ಖೇಡದ ತಿಳಿಸಿದರು.
‘ಮೂರು ತಿಂಗಳ ಹಿಂದೆ ಜಿಲ್ಲೆಯ ಇಂಡಿ, ಚಡಚಣ ಭಾಗಗಳಲ್ಲಿ 15 ಜಾನುವಾರುಗಳಿಗೆ ಚರ್ಮಗಂಟು ರೋಗ ತಗುಲಿದಾಗ ಅದರಲ್ಲಿ 7 ಜಾನುವಾರುಗಳು ಸಾವನ್ನಪ್ಪಿ, ಉಳಿದ 8 ಜಾನುವಾರುಗಳ ಆರೋಗ್ಯ ಸುಧಾರಿಸಿಕೊಂಡಿವೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಕ್ಕಪಕ್ಕ ರಾಜ್ಯಗಳ ರೋಗಪೀಡಿತ ರಾಸುಗಳು ಜಿಲ್ಲೆ ಪ್ರವೇಶಿಸದಂತೆ ಜಿಲ್ಲೆಯ 6 ಗಡಿ ಗ್ರಾಮಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಚಿಕಿತ್ಸೆ ನೀಡಲಾಗಿದೆ’ ಎಂದರು.
‘ಜಾನುವಾರುಗಳಿಗೆ ಚರ್ಮಗಂಟು ರೋಗವು ಸೊಳ್ಳೆ, ನೊಣಗಳು ಕಚ್ಚುವಿಕೆಯಿಂದ ಹಾಗೂ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ವೇಗವಾಗಿ ಹರಡುತ್ತದೆ. ಹೀಗಾಗಿ ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಪಶು ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ರೋಗ ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ಪಶುವೈದ್ಯಕೀಯ ಕೇಂದ್ರಗಳಿಗೆ ಭೇಟಿ ನೀಡಿ ರೋಗಗ್ರಸ್ಥ ರಾಸುವಿಗೆ ಚಿಕಿತ್ಸೆ ಕೊಡಿಸಬೇಕುಡಾ.ಅಶೋಕ ಗೊಣಸಗಿ ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.