ADVERTISEMENT

ನಂಜನಗೂಡು ರಾಯರಮಠ: ಮಧ್ವ ನವಮಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 12:57 IST
Last Updated 30 ಜನವರಿ 2023, 12:57 IST
ವಿಜಯಪುರದ ವಜ್ರಹನುಮಾನ ನಗರದಲ್ಲಿರುವ ಶ್ರೀ ಪ್ರಮೋದಾತ್ಮ ಗುರುಕುಲದಲ್ಲಿ ಸೋಮವಾರ ಮಧ್ವ ನವಮಿ ಪ್ರಯುಕ್ತ ಪಾಲಕಿ ಸೇವೆ ಜರುಗಿತು 
ವಿಜಯಪುರದ ವಜ್ರಹನುಮಾನ ನಗರದಲ್ಲಿರುವ ಶ್ರೀ ಪ್ರಮೋದಾತ್ಮ ಗುರುಕುಲದಲ್ಲಿ ಸೋಮವಾರ ಮಧ್ವ ನವಮಿ ಪ್ರಯುಕ್ತ ಪಾಲಕಿ ಸೇವೆ ಜರುಗಿತು    

ವಿಜಯಪುರ: ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ಮಧ್ವ ನವಮಿಯನ್ನು ಶ್ರದ್ಧಾ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಸಹಸ್ರಾರು ಜನ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.

ಬೆಳಿಗ್ಗೆ ಸುಮಧ್ವವಿಜಯ ಪಾರಾಯಣ, ವಾಯುಸ್ತುತಿ ಪುನಶ್ಚರಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಜರುಗಿದವು.

ಆ ನಂತರ ಮದಾಚಾರ್ಯರ ಸರ್ವಮೂಲ ಗ್ರಂಥಗಳು ಹಾಗೂ ಆನಂದತೀರ್ಥರ ಭಾವಚಿತ್ರವನ್ನು ರಜತ ಪೀಠದಲ್ಲಿ ಇಟ್ಟು ರಥೋತ್ಸವ ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತರ ತಂಡ ಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಮಹಿಳಾ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದರು.

ADVERTISEMENT

ಉಪನ್ಯಾಸ ನೀಡಿದ ಪಂಡಿತ್‌ ಡಾ. ಕೃಷ್ಟಾಚಾರ್ಯ ಕಾಖಂಡಕಿ, ಆಚಾರ್ಯ ಮಧ್ವರ ತತ್ವಾದರ್ಶಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ. ಅವರ ಸಕಲ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ. ಮಧ್ವ ಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರ ಹೆಸರು ಶಿಖರಪ್ರಾಯ ಎಂದರು.‌

ಶ್ರೀ ಮಠದ ಅರ್ಚಕರಾದ ರವಿ ಆಚಾರ್ಯ, ಶ್ರೀಧರಾಚಾರ್ಯರು, ಶ್ರೀಧರ ಜೋಶಿ(ಮುತ್ತಗಿ) ಹಾಗೂ ದಾಮೋದರಾಚಾರ್ಯರ ಜೊತೆಗೂಡಿ ವೃಂದಾವನ ಸೇರಿದಂತೆ ರಥವನ್ನು ಪುಷ್ಪಗಳಿಂದ ಅಲಂಕರಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮಠದ ವಿಚಾರಣಕರ್ತಾ ಗೋಪಾಲ ನಾಯಕ, ವಿ.ಬಿ.ಕುಲಕರ್ಣಿ, ಆರ್. ಆರ್. ಕುಲಕರ್ಣಿ, ಜಿ. ಎಸ್. ಕುಲಕರ್ಣಿ, ನಾಡಿಗ, ಬಂಡಾಚಾರ್ಯ ಜೋಶಿ(ಕೂಡಗಿ), ವಿ. ಡಿ. ಜೋಶಿ ಇದ್ದರು.

ಪ್ರಸನ್ನೇಶ್ವರ ದೇವಾಲಯ:

ನಗರದ ಹಳಕೇರಿ ಗಲ್ಲಿಯಲ್ಲಿರುವ ಪುರಾತನ ಪ್ರಸನ್ನೇಶ್ವರ ಹಾಗೂ ಪ್ರಸನ್ನಾಂಜನೇಯ ದೇವಾಲಯದಲ್ಲಿ ಮಧ್ವ ನವಮಿಯನ್ನು ಭಕ್ತಿ ಸಡಗರಗಳಿಂದ ಆಚರಿಸಲಾಯಿತು.

ಬೆಳಿಗ್ಗೆ ಸುಪ್ರಭಾತ, ಅಲಂಕಾರ ಸೇವೆ, ಫಲಪಂಚಾಮೃತ ನಡೆದವು. ನಂತರ ಶ್ರೀ ಸತ್ಯನಾಯಣ ಪೂಜೆ, ಶ್ರೀ ಪ್ರಕಾಶಾಚಾರ್ಯ ಮದಭಾವಿ ನೇತೃತ್ವದಲ್ಲಿ ಜರುಗಿತು. ಬಳಿಕ ಪ್ರವಚನ, ಮಹಾ ಮಂಗಳಾರತಿ, ಮಹಾ ಪೂಜೆ,. ತೀರ್ಥ ಪ್ರಸಾದ ಜರುಗಿತು.
ದೇವಾಲಯದ ಸಮಿತಿ ಪದಾಧಿಕಾರಿಗಳಾದ ನಾಗೇಶ ಕುಲಕರ್ಣಿ, ಆನಂದ ಗಾಯಿ, ವಸಂತರಾವ ಗಾಯಿ ಮುಂತಾ ದವರು ಅತ್ಯುತ್ಸಾಹದಿಂದ ಪುಣ್ಯತಿಥಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಪ್ರಮೋದಾತ್ಮಕ ಗುರುಕುಲ:

ವಜ್ರಹನುಮಾನ ನಗರದಲ್ಲಿರುವ ಶ್ರೀ ಪ್ರಮೋದಾತ್ಮಕ ಗುರುಕುಲದಲ್ಲಿ ಮಧ್ವ ನವಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು.

ಗುರುಕುಲದಿಂದ ವಜ್ರ ಹನುಮಾನ ದೇವಸ್ಥಾನದ ವರೆಗೆ ಪಾಲಕಿ ಸೇವೆಜರುಗಿತು. ಮಹಿಳಾ ಭಜನಾ ಮಂಡಳಿಗಳ ಭಕ್ತಿ ಸಂಗೀತ ಮೈನವೇರಿಸಿತು.

ಆಚಾರ್ಯ ಮಧ್ವರನ್ನು ಕುರಿತು ಪಂಡಿತ ಅಜೀತಾಚಾರ್ಯ ಹನಗಂಡಿ ಹಾಗೂ ಪಂಡಿತ ಸಂಜೀವಾಚಾರ್ಯ ಬುರ್ಲಿ ಪ್ರವಚನ ಹೇಳಿದರು.

ಆಚರಣೆಗೆ ವಿಶೇಷ ಸೇವೆ ಸಲ್ಲಿದಕ್ಕಾಗಿ ವಿ. ಎಲ್. ಮೊಖಾಶಿ ದಂಪತಿಗಳಿಗೆ ಗುರುಕುಲದಿಂದ ಸನ್ಮಾನಿಸಲಾಯಿತು. ಸುಧೀಂದ್ರ ಗಲಗಲಿ, ಬಂಡಾಚಾರ್ಯ ಪುರೋಹಿತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.