ADVERTISEMENT

ನಡಹಳ್ಳಿಗೆ ‘ಮಹಾದಾನಿ’ ಗೌರವ ಪ್ರದಾನ

ಶ್ರೀಶೈಲ ಶ್ರೀಗಳ ಪಾದಯಾತ್ರೆ ಸಂಪನ್ನ; ಬೆಳ್ಳಿ ಸಿಂಹಾಸನ, ಪಾದುಕೆ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 13:15 IST
Last Updated 30 ನವೆಂಬರ್ 2022, 13:15 IST
ಶ್ರೀಶೈಲದಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಬೆಳ್ಳಿ ಸಿಂಹಾಸನ ಸಮರ್ಪಸಿದ ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ‘ಮಹಾದಾನಿ’ ಬಿರುದು ನೀಡಿ ಗೌರವಿಸಿದರು 
ಶ್ರೀಶೈಲದಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಬೆಳ್ಳಿ ಸಿಂಹಾಸನ ಸಮರ್ಪಸಿದ ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ‘ಮಹಾದಾನಿ’ ಬಿರುದು ನೀಡಿ ಗೌರವಿಸಿದರು    

ವಿಜಯಪುರ: ಬೆಳಗಾವಿ ಜಿಲ್ಲೆ ಯಡೂರನಿಂದ ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಮಾರ್ಗವಾಗಿ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿ ವರೆಗೆಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಕೈಗೊಂಡಿದ್ದ ಪಾದಯಾತ್ರೆ 33 ದಿನಗಳ ಕಾಲ 650 ಕಿ.ಮೀ ಕ್ರಮಿಸಿ, ಶ್ರೀಶೈಲದಲ್ಲಿ ಸಂಪನ್ನವಾಯಿತು.

ಶ್ರೀಶೈಲದಲ್ಲಿ ಮಹಾಯಾತ್ರೆ ಸಂಪನ್ನಗೊಂಡ ಬಳಿಕ ನಡೆದ ಧರ್ಮಸಭೆಯಲ್ಲಿಪಾದಯಾತ್ರೆ ಕಾರ್ಯಾಧ್ಯಕ್ಷ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರುಶ್ರೀಶೈಲ ಪೀಠಕ್ಕೆ ₹ 8 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ ಸಿಂಹಾಸನ, 2 ಕೆ.ಜಿ. ತೂಕದ ಬೆಳ್ಳಿ ಪಾದುಕೆ ಅರ್ಪಿಸಿದರು.

ಆಶೀರ್ವಚನ ನೀಡಿದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು,‘ಪಾದಯಾತ್ರೆಯಲ್ಲಿ ಪಾದಗಳು ನನ್ನವು. ಮಹಾಯಾತ್ರೆ ಮಾಡಿದ್ದು ಭಕ್ತರು. ಇದರ ಕಾರ್ಯಾಧ್ಯಕ್ಷತೆ ವಹಿಸಿದ್ದವರು ನಡಹಳ್ಳಿಯವರು. ದಾನಗಳಲ್ಲಿ ಪ್ರಮುಖವಾದ ಪಂಚ ದಾನಗಳನ್ನು ಮಾಡಿ ಅವರು ಶ್ರೀಶೈಲ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗಿದ್ದಾರೆ. ಅವರಿಗೆ ಶ್ರೀಶೈಲ ಪೀಠದಿಂದ ‘ಮಹಾದಾನಿ’ ಬಿರುದು ನೀಡಿ ಗೌರವಿಸುತ್ತಿದ್ದೇವೆ‘ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ನಡಹಳ್ಳಿ, ಶ್ರೀಗಳ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರಕಿದೆ. ಧರ್ಮ ಜಾಗೃತಿಗಾಗಿ ಶ್ರೀಗಳು ಪಾದಯಾತ್ರೆ ನಡೆಸಿದ್ದನ್ನು ಇಡೀ ನಾಡು, ದೇಶ ಸಂತೋಷದಿಂದ ಸ್ವೀಕರಿಸಿದೆ. 33 ದಿನಗಳ ಕಾಲ ಶ್ರೀಗಳಿಗೆ ಯಾವುದೇ ಸಣ್ಣ ಪುಟ್ಟ ತೊಂದರೆ ಆಗದಂತೆ ಸದ್ಭಕ್ತರು ನೋಡಿಕೊಂಡಿದ್ದಾರೆ. ಶ್ರೀಗಳ ಈ ನಡಿಗೆ 650 ಕಿ.ಮೀ.ವರೆಗೂ ನಡೆದು ಬಂದದ್ದು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಾಗಿದೆ ಎಂದರು.

ಶ್ರೀಶೈಲ ಶ್ರೀಗಳು ಭಕ್ತರಿಗೋಸ್ಕರ ನಡೆದುಕೊಂಡು ಬಂದಿರುವವೀರಶೈವ ಧರ್ಮದ ಏಕೈಕ,ಪ್ರಥಮ ಜಗದ್ಗುರುಗಳಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಜಗದ್ಗುರು ಎನ್ನಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಶೈಲದಲ್ಲಿ ಆಸ್ಪತ್ರೆ, ಯಾತ್ರಾಲಯ, ಕಂಬಿ ಮಂಟಪ ಕಟ್ಟುವ ಶ್ರೀಗಳ ಸಂಕಲ್ಪಕ್ಕೆ ಲಕ್ಷಾಂತರ ಭಕ್ತರು ಕೈ ಜೋಡಿಸಿದ್ದಾರೆ. 33 ದಿನಗಳ ಜಗದ್ಗುರುಗಳ ಸಂದೇಶಗಳನ್ನು ಮನೆಮನೆಗೆ ತೆಗೆದುಕೊಂಡು ಹೋಗೋಣ, ಧರ್ಮ ಜಾಗೃತಿ ಜೊತೆಗೆ ಪರೋಪಕಾರಿ ಬದುಕು ನಡೆಸುವ ಸಂಕಲ್ಪ ಮಾಡೋಣ ಎಂದರು.

ವೈಭವದ ಸ್ವಾಗತ:

ಪಾದಯಾತ್ರೆ ಶ್ರೀಶೈಲ ಪ್ರವೇಶಿಸುತ್ತಿದ್ದಂತೆ ವಾದ್ಯ, ವೈಭವದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪಾದಯಾತ್ರಿಗಳಿಗೆ ಮಲ್ಲಿಕಾರ್ಜುನನ ಗರ್ಭಗುಡಿಯಲ್ಲಿನ ಲಿಂಗ ಸ್ಪರ್ಶಿಸಿ ದರ್ಶನಭಾಗ್ಯದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆರು ವರ್ಷಗಳ ನಂತರ ಬರಿಗೈಗಳಿಂದ ಲಿಂಗ ಸ್ಪರ್ಶಕ್ಕೆ ಮೊದಲ ಬಾರಿ ಅವಕಾಶ ನೀಡಿದ್ದು, ಭಕ್ತರ ಹುಮ್ಮಸ್ಸು ಹೆಚ್ಚಿಸಿತ್ತು. ಶ್ರೀಗಳಿಗೆ ನೀಡಿದ ಬೆಳ್ಳಿ ಪಾದುಕೆಗಳನ್ನು ಶಾಸಕ ನಡಹಳ್ಳಿ ಅವರು ತಲೆ ಮೇಲೆ ಹೊತ್ತುಕೊಂಡು ಜಗದ್ಗುರು ಪಂಡಿತಾರಾಧ್ಯರ ಗದ್ದುಗೆಯವರೆಗೂ ಸಾಗಿ ಬಂದು, ಅವುಗಳನ್ನು ಗದ್ದುಗೆಯ ಮೇಲಿರಿಸಿ ಭಕ್ತಿಭಾವ ಮೆರೆದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಬಸಯ್ಯ ನಂದಿಕೇಶ್ವರಮಠ, ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಶಿವಶಂಕರ ಹಿರೇಮಠ, ಲಕ್ಷ್ಮಣ ಬಿಜ್ಜೂರ ಪಾಲ್ಗೊಂಡಿದ್ದರು.

*****

ಧರ್ಮ ನಶಿಸುತ್ತಿರುವ, ಧರ್ಮದ ಆಚರಣೆ ಮರೆತು ಹೋಗುತ್ತಿರುವ ಈ ಸಂದರ್ಭ ಧರ್ಮ ಜಾಗೃತಿಗಾಗಿ, ಮಾನವ ಧರ್ಮಕ್ಕೆ ಜಯವಾಗಬೇಕು ಎನ್ನುವ ಸಂದೇಶ ಸಾರಿರುವ ಶ್ರೀಶೈಲ ಶ್ರೀಗಳ ಪಾದಯಾತ್ರೆ ಮಾಡಿರುವುದು ಮರೆಯಲಾಗದು

-ಎ.ಎಸ್.ಪಾಟೀಲ ನಡಹಳ್ಳಿ, ಕಾರ್ಯಾಧ್ಯಕ್ಷ, ಪಾದಯಾತ್ರೆ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.