ಮನಗೂಳಿ:ಪಟ್ಟಣದ ಪಟ್ಟಿಕಂಥಿ ಹಿರೇಮಠದ ಲಿಂಗೈಕ್ಯ ಸಂಗನಬಸವ ಶಿವಾಚಾರ್ಯರ 18ನೇ ಸ್ಮರಣೋತ್ಸವ, ಲಿಂಗೈಕ್ಯ ಮಹಾಂತ ಶಿವಾಚಾರ್ಯರ 70ನೇ ಯಾತ್ರಾ ಮಹೋತ್ಸವ ಶನಿವಾರ ಅಪಾರ ಭಕ್ತರ ಸಮ್ಮುಖ ಅದ್ಧೂರಿಯಿಂದ ನಡೆಯಿತು.
ಬೆಳ್ಳಿ ಪಲ್ಲಕ್ಕಿಯಲ್ಲಿ ಉಭಯ ಶ್ರೀಗಳ ರಜತ ಮೂರ್ತಿಯನ್ನಿಟ್ಟು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಪಟ್ಟಣಿಗರು ಸೇರಿದಂತೆ, ಸುತ್ತಮುತ್ತಲಿನ ಹಳ್ಳಿಗಳ ಜನರು ಮೆರವಣಿಗೆಯಲ್ಲಿ ಭಾಗಿಯಾದರು.
ಮಠದ ಡಾ.ಮಹಾಂತಲಿಂಗ ಶಿವಾಚಾರ್ಯರ ಸಿಂಹಾಸನಾರೋಹಣ ಧಾರ್ಮಿಕ ಸಮಾರಂಭವೂ ಈ ಸಂದರ್ಭ ನಡೆಯಿತು. ಇದರ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಡಾ.ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ‘ಪ್ರಸ್ತುತ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಂದೆ–ತಾಯಿಯನ್ನೇ ದೇವರು ಎಂದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಪ್ರತಿಯೊಬ್ಬರೂ ಇಷ್ಟಲಿಂಗದ ಮಹತ್ವ ಅರಿತು, ಇಷ್ಟಲಿಂಗ ಪೂಜೆ ಮತ್ತು ವಿಭೂತಿ ಧಾರಣೆ ಮಾಡಿಕೊಳ್ಳಬೇಕು’ ಎಂದು ಇದೇ ಸಂದರ್ಭ ಸಲಹೆ ನೀಡಿದರು.
ಡಾ.ಶಿವಕುಮಾರ ಸ್ವಾಮೀಜಿ, ಭೃಂಗೇಶವರ ಶಿವಾಚಾರ್ಯರು, ಅಭಿನವ ಸಂಗನಬಸವ ಶಿವಾಚಾರ್ಯರು, ಶಿವಪ್ರಕಾಶ ಶಿವಾಚಾರ್ಯರು, ಜನತಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುಭಾಷಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಚಂದ್ರಶೇಖರಗೌಡ ಪಾಟೀಲ ಸಭೆಯಲ್ಲಿ ಉಪಸ್ಥಿತರಿದ್ದರು.
ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ ಸ್ವಾಗತಿಸಿದರು. ಶಿಕ್ಷಕ ಸಿದ್ರಾಮ ಬಿರಾದಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.