ADVERTISEMENT

ವಿಜಯಪುರ: ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ

ಪೊಲೀಸ್‌ ಭದ್ರತೆ ಹೆಚ್ಚಳ; ಬಲವಂತವಾಗಿ ಬಂದ್‌ ಮಾಡಿಸುವಂತಿಲ್ಲ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 12:40 IST
Last Updated 27 ಸೆಪ್ಟೆಂಬರ್ 2020, 12:40 IST
ಕರ್ನಾಟಕ ಬಂದ್‌
ಕರ್ನಾಟಕ ಬಂದ್‌   

ವಿಜಯಪುರ: ರೈತ-ಕಾರ್ಮಿಕ ವಿರೋಧಿ ಹಾಗೂ ಬಂಡವಾಳಿಗರ ಪರವಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳನ್ನು ವಿರೋಧಿಸಿ ಸೆ.28ರಂದುಹಮ್ಮಿಕೊಂಡಿರುವ ‘ಕರ್ನಾಟಕ ಬಂದ್’ಗೆಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬಂದ್‌ಗೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ,ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ವಿಜಯಪುರ ಜಿಲ್ಲಾ ಸಮಿತಿಅಧ್ಯಕ್ಷಮಲ್ಲಿಕಾರ್ಜುನ ಎಚ್.ಟಿ.,ಚೆಗುವೆರಾ ಯೂಥ್ ಫೆಡರೇಷನ್ ಸಂಘಟನೆ ಅಧ್ಯಕ್ಷ ಮಂಜುನಾಥ ಎಸ್.ಕಟ್ಟಿಮನಿ,ವಿಜಯಪುರ ಮರ್ಚಂಟ್ಸ್‌ ಅಸೋಸಿಯೇಶನ್‍,ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿಎಸ್‍ಒ) ವಿದ್ಯಾರ್ಥಿ ಸಂಘಟನೆ ಮುಖಂಡರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಸ್‌ ಸಂಚಾರ ಇರಲಿದೆ:

ADVERTISEMENT

ಬಂದ್‌ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿನಾರಾಯಣಪ್ಪ ಕುರುಬರ, ಎಂದಿನಂತೆ ಸೋಮವಾರವೂ ಬಸ್‌ಗಳ‌ ಕಾರ್ಯಾಚರಣೆ ಇರಲಿದೆ. ಇದುವರೆಗೂ ಬಂದ್‌ ಸಂಬಂಧ ಯಾವುದೇ ಸಂಘಟನೆಗಳಾಗಲಿ, ಪೊಲೀಸರಾಗಲಿ ಮಾಹಿತಿ ನೀಡಿಲ್ಲ. ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೊಲೀಸ್‌ ನಿಯೋಜನೆ:

ಬಂದ್‌ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 65 ಪೊಲೀಸ್‌ ಅಧಿಕಾರಿಗಳು,1,100 ಪೊಲೀಸ್‌ ಸಿಬ್ಬಂದಿ, ಡಿಎಆರ್‌ 6 ಮತ್ತು ಐಆರ್‌ಬಿ ಒಂದು ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಆಯಾ ಸಂಘಟನೆಗಳ ಮುಖಂಡರಿಗೆ ನೋಟಿಸ್‌ ನೀಡಲಾಗಿದೆ. ಶಾಂತಿ ಭಂಗ ಉಂಟುಮಾಡಿದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಅಂತಹ ಸಂಘಟನೆಗಳ ಮುಖಂಡರನ್ನೇ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಲವಂತವಾಗಿ ಬಂದ್‌ ಮಾಡಿಸುವಂತಿಲ್ಲ. ಅಲ್ಲದೇ, ಹೆದ್ದಾರಿ, ರಸ್ತೆ ತಡೆಗೆ ಅವಕಾಶವಿಲ್ಲ. ಬಸ್‌ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಗಳು ಮುಂದೂಡಿಕೆ

ವಿಜಯಪುರ:ಸೆ.28ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎಲ್ಲ ಸ್ನಾತಕ ಪದವಿ ಪರೀಕ್ಷೆಗಳನ್ನು ಬಂದ್‍ ಹಿನ್ನೆಲೆಯಲ್ಲಿ ಅಕ್ಟೋಬರ್‌ 1ಕ್ಕೆ ಮುಂದೂಡಲಾಗಿದೆ.

ಸೆ.29ಕ್ಕೆ ಪರೀಕ್ಷೆ:

ಎಸ್.ಎಸ್.ಎಲ್.ಸಿ ಪೂರಕ ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ವಿಷಯಗಳ ಪರೀಕ್ಷೆಯನ್ನು ಸೆ.29ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ರೈತರು, ಕಾರ್ಮಿಕರು ಒಂದಾಗಿ ಹೋರಾಟಕ್ಕೆ ಮುನ್ನುಗ್ಗುವ ಸಂದರ್ಭ ಇದಾಗಿದ್ದು, ಬಂದ್‍ನಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು
ಮಲ್ಲಿಕಾರ್ಜುನ ಎಚ್.ಟಿ.
ಜಿಲ್ಲಾ ಸಮಿತಿ ಅಧ್ಯಕ್ಷ, ಎಐಯುಟಿಯುಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.