
ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒತ್ತಾಯಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಪದಾಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ವಿವಿಧ ಸಹಕಾರಿ ಸಂಘಗಳ ಮುಖಂಡರು, ಕನ್ನಡಪರ ಹೋರಾಟಗಾರರು, ವಿದ್ಯಾರ್ಥಿಗಳು ಶುಕ್ರವಾರ ತಮ್ಮ ರಕ್ತದಿಂದ ಸಹಿ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗಾಗಿ ಕಳೆದ 37 ದಿನಗಳಿಂದ ಸತತ ಹೋರಾಟ ನಡೆಯುತ್ತಿದೆ. ಹೋರಾಟದ ಭಾಗವಾಗಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸ್ಥಳದಲ್ಲಿ ಅಳವಡಿಸಲಾಗಿದ್ದ ಶುಭ್ರವರ್ಣದ ಬೃಹತ್ ಬಟ್ಟೆಯ ಮೇಲೆ ಅನೇಕರು ತಮ್ಮ ರಕ್ತದಿಂದ ಸಹಿ ಮಾಡಿದರು.
ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಸುರಕ್ಷಿತ ಉಪಕರಣಗಳ ಮೂಲಕ ತಮ್ಮ ರಕ್ತವನ್ನು ಪಡೆದು ಅದೇ ರಕ್ತದಲ್ಲಿ ಸಹಿ ಮಾಡಿದರು. ಇನ್ನೂ ಕೆಲವರು ‘ಸರ್ಕಾರಿ ವೈದ್ಯಕೀಯ ಕಾಲೇಜ್ ಬೇಕೆ ಬೇಕು, ಹೋರಾಟಕ್ಕೆ ನಮ್ಮ ಬೆಂಬಲ’ ಎಂದು ರಕ್ತದಲ್ಲಿಯೇ ಉದ್ಘೋಷಗಳನ್ನು ಬರೆದರು.
ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಶೋಷಣೆಗೆ ದಾರಿ, ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಗಗನಕುಸುಮವಾಗುವ ಜೊತೆಗೆ ಬಡ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುವಂತಾಗುತ್ತದೆ. ಹೀಗಾಗಿ ಪೂರ್ಣವಾಗಿ ಸರ್ಕಾರವೇ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಮುಂದಾಗಬೇಕು. ಇದು ಜಿಲ್ಲೆಯ ಜನತೆಯ ಒಕ್ಕೊರೆಲಿನ ಬೇಡಿಕೆ. ಇದು ಕೇವಲ ಸ್ವಾಭಿಮಾನದ ಬೇಡಿಕೆಯಲ್ಲ, ಜನಹಿತದ ಬೇಡಿಕೆ. 150 ಎಕರೆ ಜಾಗ, ಎಂಆರ್‌ಐ, ಪೂರಕವಾದ ಕಟ್ಟಡ ಹೀಗೆ ಎಲ್ಲ ಸೌಲಭ್ಯವಿದ್ದು ಕೇವಲ ₹100 ಕೋಟಿ ಒದಗಿಸಿದರೆ ಸಾಕು ಮೆಡಿಕಲ್ ಕಾಲೇಜ್ ಸ್ಥಾಪನೆಯಾಗುತ್ತದೆ. ಆದರೆ ಜಿಲ್ಲೆಯ ಜನತೆಯ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ, ಹೋರಾಟ 37ನೇ ದಿನಕ್ಕೆ ಕಾಲಿರಿಸಿದರೂ ಸಹ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೋರಾಟಗಾರರಾದ ಭಿ. ಭಗವಾನರೆಡ್ಡಿ, ಭರತ್‌ಕುಮಾರ್ ಎಚ್.ಟಿ, ಸಿದ್ಧಲಿಂಗ ಬಾಗೇವಾಡಿ ಅಸಮಾಧಾನ ಹೊರಹಾಕಿದರು.
ಈ ಹೋರಾಟಕ್ಕೆ ವ್ಯಾಪಕ ಸ್ಪಂದನೆ ದೊರಕಿದೆ. ನೂರಾರು ಜನರು ಶುಭ್ರ ಬಟ್ಟೆಯ ಮೇಲೆ ರಕ್ತದಿಂದ ಸಹಿ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹೋರಾಟಗಾರರಾದ ಅರವಿಂದ ಕುಲಕರ್ಣಿ, ಸುರೇಶ ಜಿ.ಬಿ, ಎಚ್.ಟಿ. ಮಲ್ಲಿಕಾರ್ಜುನ, ಲಕ್ಷ್ಮಣ ಹಂದ್ರಾಳ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ, ಶಿವಬಾಳಮ್ಮ, ಗೀತಾ ಸೇರಿದಂತೆ ಅನೇಕ ಹೋರಾಟಗಾರರು ತಮ್ಮ ರಕ್ತದಲ್ಲಿ ಸಹಿ ಮಾಡಿ ವೈದ್ಯಕೀಯ ಕಾಲೇಜ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.