ಚಡಚಣ: ‘ನಿರ್ಗತಿಕರು ಹಾಗೂ ಕುಟುಂಬಗಳಲ್ಲಿ ನಿರ್ಲಕ್ಷಿಸಲ್ಪಟ್ಟ ಜನರ ಜೀವನದಲ್ಲಿ ಆಶಾಕಿರಣವಾಗಿರುವ ಅನಾಥಾಶ್ರಮಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ’ ಎಂದು ಶಾಸಕ ವಿಠ್ಟಲ ಕಟಕಧೋಂಡ ಹೇಳಿದರು.
ತಾಲ್ಲೂಕಿನ ಮಣಂಕಲಗಿ ಗ್ರಾಮದಲ್ಲಿ ಸೋಮವಾರ ಮಾಹೇರ ಸಂಸ್ಥೆಯ 71ನೇ ಅನಾಥಾಶ್ರಮ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
‘ಮಾಹೇರ ಸಂಸ್ಥೆಯ ಲೂಸಿ ಕುರಿಯನ್ ಅವರು ನಿರ್ಗತಿಕ ಜನ ಮತ್ತು ಅನಾಥ ಮಕ್ಕಳನ್ನು ಕರೆತಂದು ಅವರ ಊಟ, ವಸತಿ ಉಪಚಾರ, ಶಿಕ್ಷಣ ನೀಡುವದರೊಂದಿಗೆ ವೃತ್ತಿ ತರಬೇತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿ’ ಎಂದರು.
ಮಾಹೇರ ಸಂಸ್ಥೆಯ ಸಂಸ್ಥಾಪಕಿ ಲೂಸಿ ಕುರಿಯನ್ ಮಾತನಾಡಿ, ‘ಸಂಸ್ಥೆಯು ಪ್ರಾರಂಭವಾಗಿ 28 ವರ್ಷಗಳಲ್ಲಿ ದೇಶದ 7 ರಾಜ್ಯಗಳಲ್ಲಿ 71 ಆಶ್ರಯ ತಾಣಗಳನ್ನು ರೂಪಿಸಿದೆ. ಇದಕ್ಕೆಲ್ಲ ಕಾರಣ ಭೂದಾನಿಗಳು ಮತ್ತು ದಾನಿಗಳು’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ತದ್ದೇವಾಡಿ ಮಹಾಂತೇಶ ಸ್ವಾಮೀಜಿ, ‘ಲೂಸಿ ಕುರಿಯನ್ ಅವರ ಸಾಮಾಜಿಕ ಚಿಂತನೆ, ಕಳಕಳಿ ಶ್ಲಾಘನೀಯ. ಅವರ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸೋಣ’ ಎಂದರು.
ಮುಖಂಡ ಎಚ್.ಆರ್.ಉಟಗಿ, ಶ್ರೀನಿವಾಸ ಕುಲಕರ್ಣಿ, ಭೂದಾನಿ ಗುರಲಿಂಗಪ್ಪ ಮಸಳಿ, ಬಿ.ಎಂ ಕೋರೆ, ಶಶಿಧರ ಕಲ್ಯಾಣಶೆಟ್ಟಿ, ಶ್ಯಾಮ ಪವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.