ವಿಜಯಪುರ: ತಾಯಿ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಸದೃಢ ಮಗುವಿನ ಆರೋಗ್ಯದ ದೃಷ್ಟಿಯಿಂದ ತಾಯಂದಿರು ನವಜಾತ ಶಿಶುಗಳಿಗೆ ಎದೆಹಾಲು ನೀಡುವಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿ ತನ್ನ ಮಗುವಿಗೆ ಎದೆಹಾಲು ಉಣಿಸುವುದರಿಂದ ಮಗುವಿನ ಆರೋಗ್ಯದಲ್ಲಿ ಧನಾತ್ಮಕ ಪರಿಣಾಮಗಳಾಗುತ್ತವೆ, ಮಗುವಿನ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಮಗುವಿನ ಹಾಲುಣಿಸುವಿಕೆಯಿಂದ ಸಾಂಕ್ರಾಮಿಕ ಕಾಯಿಲೆಗಳು, ಅತೀಸಾರ, ಉಸಿರಾಟದ ಸೋಂಕುಗಳನ್ನು ದೂರವಿಡಬಹುದು ಎಂದು ಅವರು ಸಲಹೆ ನೀಡಿದರು.
ಆರ್.ಎಂ.ಓ ಡಾ.ಸುರೇಶ ಚವ್ಹಾಣ ಮಾತನಾಡಿ, ತಾಯಿ ಹಾಗೂ ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ತಾಯಿಯ ಎದೆ ಹಾಲಿಗೆ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆ ಹಾಲನ್ನು ಉಣಿಸುವ ಮೂಲಕ ದೇಶದ ಆರೋಗ್ಯವಂತ ಪ್ರಜೆಯನ್ನಾಗಿ ರೂಪಿಸಬೇಕು ಎಂಧರು.
ಹುಟ್ಟಿದ ಮಗುವಿಗೆ ಆರು ತಿಂಗಳ ತನಕ ತಾಯಿಯ ಹಾಲೊಂದನ್ನೇ ಕೊಡಬೇಕು. ಎದೆ ಹಾಲು ಕೊಡುವುದರಿಂದ ಪ್ರತಿ ಶತ 25 ರಷ್ಟು ಶಿಶು ಮರಣವನ್ನು ಕಡಿಮೆ ಮಾಡಬಹುದು. ಸಾರ್ವಜನಿಕರಿಗೆ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿವಹಿಸಲು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ತನ್ಯಪಾನದ ಮಹತ್ವವನ್ನು ಕಾರ್ಯರೂಪಕ್ಕೆ ತರುವ ಅಗತ್ಯವಿದೆ ಎಂದು ಅವರು ಹೇಳಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಪರಸುರಾಮ ಹಿಟ್ನಳ್ಳಿ ಮಾತನಾಡಿ, ಉತ್ತಮ ಪೌಷ್ಠಿಕ ಆಹಾರವನ್ನು ತಾಯಂದಿರು ಸೇವಿಸಬೇಕು ಯಾವುದಕ್ಕೂ ಮಗುವಿನ ಎದೆ ಹಾಲು ನೀಡುವುದನ್ನು ತಪ್ಪಿಸಬಾರದು. ಮಗುವಿಗೆ ಪದೇ ಪದೇ ಹಾಲನ್ನು ಕುಡಿಸುವುದರಿಂದ ತಾಯಿಯ ಎದೆಹಾಲು ಹೆಚ್ಚಾಗುತ್ತದೆ. ಎಲ್ಲ ತಾಯಂದಿರು ತಮ್ಮ ಮಗುವಿಗೆ ಹುಟ್ಟಿನಿಂದ 2 ವರ್ಷದ ವರೆಗೆ ಎದೆ ಹಾಲನ್ನು ಕುಡಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ.ಯಲಗೂರಸ್ವಾಮಿ, ಮಗುವಿನ ಸೂಕ್ತ ಆಹಾರ ಪದ್ದತಿಗಳು ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಾಗಿರುತ್ತದೆ. ಡಬ್ಲೂಎಚ್‍ಓ ಮತ್ತು ಯುನಿಸೆಫ್ ಸೂಚನೆಯ ಪ್ರಕಾರ ಮಗು ಹುಟ್ಟಿದ ಒಂದು ಗಂಟೆಯೊಳಗೆ ಸ್ತನಪಾನ ಆರಂಭ ಮಾಡುವುದು ಅತೀ ಅವಶ್ಯಕತೆವಿದೆ ಎಂದು ಹೇಳಿದರು.
ಚಿಕ್ಕ ಮಕ್ಕಳ ತಜ್ಞರಾದ ಡಾ.ಸುಧೀರ ಚವ್ಹಾಣ, ಡಾ.ವಿನಯ, ಡಾ.ಶೈಲಾಶ್ರೀ, ಡಾ. ರವಿ ಬರಡೋಲ, ಮಾರ್ಗಸೂಚಕ ರಮೇಶ ರಾಠೋಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಮೊತಿಲಾಲ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ,ಡಾ.ಸುಧೀರ ಚವ್ಹಾಣ ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.