ಮುದ್ದೇಬಿಹಾಳ : ರಾಜ್ಯ ಸರ್ಕಾರ ಬಹುತೇಕ ಕಾಗದ ರಹಿತ ಆಡಳಿತ ವ್ಯವಸ್ಥೆಗೆ ಒತ್ತು ನೀಡಿದೆ. ಅಲ್ಲದೇ ಸಾರ್ವಜನಿಕರಿಗೆ ಅಂಗೈ ತುದಿಯಲ್ಲಿಯೇ ಮಾಹಿತಿ ನೀಡುವ ಸಲುವಾಗಿ ಎಲ್ಲ ಸೇವೆಗಳನ್ನು, ಸರ್ಕಾರಿ ಕಚೇರಿಗಳ ಮಾಹಿತಿಯನ್ನು ತಿಳಿಸಲು ವೆಬ್‌ಸೈಟ್ ರಚಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಮುದ್ದೇಬಿಹಾಳ ಪುರಸಭೆಯಲ್ಲಿ ವೆಬ್‌ಸೈಟ್ ಇದ್ದರೂ ಸರಿಯಾದ ಮಾಹಿತಿ ನೀಡಿಲ್ಲ. ಹಿಂದಿನ ಅಧಿಕಾರಿಗಳ, ಕಾನೂನು ಸಲಹೆಗಾರರ ಫೋಟೊಗಳೇ ಇದ್ದು ಜನತೆಗೆ ತಪ್ಪು ಸಂದೇಶ ನೀಡುವಂತಿದೆ.
ಈ ಹಿಂದಿನ ಮುಖ್ಯಾಧಿಕಾರಿಯಾಗಿದ್ದ ಉಮೇಶ ಚಲವಾದಿ ಅವರು ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರ ಭಾವಚಿತ್ರ ಸಮೇತ ಮಾಹಿತಿ ಬಿತ್ತರವಾಗುತ್ತಿದೆ. ಕಾನೂನು ಸಲಹೆಗಾರರ ಪೇಜ್‌ನಲ್ಲಿ ಗಮನಿಸಿದರೆ ಈ ಹಿಂದಿನ ವಕೀಲರೇ ಸೇವೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ.
ಸದ್ಯಕ್ಕೆ ಮುಖ್ಯಾಧಿಕಾರಿಯಾಗಿ ಮಲ್ಲನಗೌಡ ಬಿರಾದಾರ ಸೇವೆಯಲ್ಲಿದ್ದು ಕಾನೂನು ಸಲಹೆಗಾರರಾಗಿ ಬಿ.ಎ.ನಾಡಗೌಡ ಸೇವೆಯಲ್ಲಿದ್ದಾರೆ. ಆದರೆ ಹಿಂದಿನ ಕಾನೂನು ಸಲಹೆಗಾರ ಎಂ.ಆರ್.ಪಾಟೀಲ ವಕೀಲರು ಪುರಸಭೆಗೆ ಕಾನೂನು ಸಲಹೆಗಾರರು ಎಂದು ಮಾಹಿತಿ ಪುರಸಭೆ ವೆಬ್‌ಸೈಟ್‌ನಿಂದ ತಿಳಿದು ಬರುತ್ತಿದೆ.
ಇನ್ನು ಕೆಲವು ಕಡೆ ಮುಖ್ಯಾಧಿಕಾರಿಗಳ ಹೆಸರು ಮಲ್ಲನಗೌಡ ಬಿರಾದಾರ ಎಂದಿದ್ದರೆ ಪುರಸಭೆಯ ಅಧಿಕಾರಿಗಳ ಪಟ್ಟಿ ತೆಗೆಯುತ್ತಿದ್ದಂತೆ ಉಮೇಶ ಚಲವಾದಿ ಮುಖ್ಯಾಧಿಕಾರಿ ಎಂದು ತೋರಿಸುತ್ತಿದೆ. ವರ್ಷಕ್ಕೂ ಮಿಗಿಲಾಗಿ ಅಧಿಕಾರ ವಹಿಸಿಕೊಂಡರೂ ಪುರಸಭೆ ವೆಬ್‌ಸೈಟ್‌ನಲ್ಲಿ ಅಧಿಕಾರಿಗಳು, ಕಾನೂನು ಸಲಹೆಗಾರರ ಮಾಹಿತಿ ಅಪಡೇಟ್ ಆಗಿಲ್ಲ. ಅಲ್ಲದೇ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ ಅವರ ಭಾವಚಿತ್ರವನ್ನೂ ಅಳವಡಿಸಿಲ್ಲ.
ಕಾನೂನು ಸಲಹೆಗಾರರು ಸ್ಥಾಯಿ ಸಮಿತಿ ಅಧ್ಯಕ್ಷರು ಹೊಸದಾಗಿ ಆಯ್ಕೆಯಾಗಿದ್ದು ಈ ಬಗ್ಗೆ ಗಮನ ಹರಿಸಿ ತಕ್ಷಣ ಮಾಹಿತಿ ಅಪಡೇಟ್ ಮಾಡಲು ಐಟಿ ಸಿಬ್ಬಂದಿಗೆ ಸೂಚಿಸುತ್ತೇನೆ.-ಮಲ್ಲನಗೌಡ ಬಿರಾದಾರ ಪುರಸಭೆ ಮುಖ್ಯಾಧಿಕಾರಿ
ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಪುರಸಭೆಗೆ ಕಾನೂನು ಸಲಹೆಗಾರನಾಗಿ ನೇಮಕಗೊಂಡು ನಾಲ್ಕು ತಿಂಗಳು ಗತಿಸಿದೆ. ಆದರೆ ವೆಬ್‌ಸೈಟ್‌ನಲ್ಲಿ ಮಾಹಿತಿ ತಪ್ಪಾಗಿರುವುದು ನನ್ನ ಗಮನಕ್ಕೂ ಬಂದಿಲ್ಲ.ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ತಿಳಿಸಲಾಗುವುದು. --ಬಿ.ಎ.ನಾಡಗೌಡಪುರಸಭೆ ಕಾನೂನು ಸಲಹೆಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.