ಬಂಧನ
(ಪ್ರಾತಿನಿಧಿಕ ಚಿತ್ರ)
ವಿಜಯಪುರ: ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಗಳ ಮೇಲೆ ಮಂಗಳವಾರ ಪೊಲೀಸರು ಗುಂಡು ಹಾರಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ನಗರದ ಎಸ್.ಎಸ್.ರಸ್ತೆಯ ಎಸ್.ಎಸ್.ಕಾಂಪ್ಲೆಕ್ಸ್‌ನಲ್ಲಿರುವ ‘ಅಮರ ವರ್ಷಿಣಿ ಸೌಹಾರ್ದ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಸೋಮವಾರ ರೌಡಿ ಶೀಟರ್ ಸುಶೀಲ್ ಕುಮಾರ ಕಾಳೆ ಎಂಬಾತನ ಮೇಲೆ ನಾಲ್ಕೈದು ಜನ ದುಷ್ಕರ್ಮಿಗಳು ಚಾಕು, ಮಚ್ಚಿನಿಂದ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದರು.
ಆರೋಪಿಗಳು ನಗರ ಹೊರವಲಯದ ಇಟ್ಟಿಂಗಿಹಾಳ ರಸ್ತೆಯಲ್ಲಿ ಇರುವ ಮಾಹಿತಿ ಆಧರಿಸಿ ಗಾಂಧಿಚೌಕ ಪೊಲೀಸ್ ಠಾಣೆ ಸಿಪಿಐ ಪ್ರದೀಪ್ ತಳಕೇರಿ ಮತ್ತು ಸಿಬ್ಬಂದಿ ಬಂಧಿಸಲು ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಬೈಕಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಆರೋಪಿಗಳ ಕಾಲಿಗೆ ಗುಂಡು ತಗುಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
‘ಆರೋಪಿ ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಎಡವಿ ಬಿದ್ದು ಗಾಯಗೊಂಡಿರುವ ಪೊಲೀಸರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದ ಬೈಕ್‌ಗೆ ನಂಬರ್ ಪ್ಲೇಟ್ ಇರಲಿಲ್ಲ, ಅದನ್ನು ಎಲ್ಲಿಯೋ ಕದ್ದು ತಂದಿದ್ದಾರೆ. ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ನಿಂಬರಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.