ವಿಜಯಪುರ: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮೇ 18ರಂದು ರಾತ್ರಿ ನಡೆದಿದ್ದ ರೋಹಿತ್ ಪವಾರ (23) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕನಕದಾಸ ಬಡಾವಣೆಯ ಸಿದ್ದಗಂಗಾ ಶಾಲೆಯ ಹಿಂದಿನ ನಿವಾಸಿ ಮುಜಮಿಲ್ ಹಾಸಿಂಖಾದ್ರಿ ಇನಾಂದಾರ (22), ರಾಜಾಜಿ ನಗರದ ಸಾಯಿನಾಥ ಪವಾರ (20), ಗಚ್ಚಿನಕಟ್ಟಿ ಕಾಲೊನಿಯ ಶರಣು ಶಿವಾನಂದ ಕುರಿ (19) ಹಾಗೂ ಬಾಲಕನೊಬ್ಬ ಬಂಧಿತರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ನಾಲ್ವರು ಕೊಲೆ ಆರೋಪಿಗಳು ವಿಜಯಪುರ ನಗರದ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದಾರೆ ಎಂದು ಹೇಳಿದರು.
ಕೊಲೆಗೆ ಕಾರಣ: ಬಡ್ಡಿ ವ್ಯವಹಾರ ಮಾಡುವ ಆನಂದ ನಗರದ ನಿವಾಸಿ ವಸಂತ ಚವ್ಹಾಣ ಎಂಬಾತನ ಬಳಿ ಆರೋಪಿಗಳಾದ ಮುಜಮಿಲ್ ಇನಾಂದಾರ ₹ 2 ಲಕ್ಷ ಮತ್ತು ಸಾಯಿನಾಥ ಪವಾರ ₹ 88 ಸಾವಿರವನ್ನು ತಿಂಗಳಿಗೆ ₹ 10ರ ಬಡ್ಡಿಯಂತೆ ಸಾಲ ಪಡೆದುಕೊಂಡಿದ್ದರು. ಆದರೆ, ಆರೋಪಿಗಳು ಸಾಲದ ಹಣ ಮತ್ತು ಬಡ್ಡಿಯನ್ನು ಮರಳಿ ಕೊಡದೇ ಇದ್ದ ಕಾರಣ ವಸೂಲಿ ಮಾಡಿಕೊಡುವಂತೆ ವಸಂತ ಚವ್ಹಾಣ ಕೊಲೆಯಾದ ರೋಹಿತ್ ಪವಾರನಿಗೆ ಹೇಳಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಋಷಿಕೇಶ ಸೋನಾವಣೆ ತಿಳಿಸಿದರು.
ಸಾಲದ ಹಣ ಮತ್ತು ಬಡ್ಡಿಯನ್ನು ಕೊಡುವಂತೆ ರೋಹಿತ್ ಪವಾರನು ಪದೇ ಪದೇ ಧಮಕಿ ಕೊಡುವುದು, ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಕಾರಣ ಆರೋಪಿಗಳೆಲ್ಲರೂ ಸೇರಿ ರೋಹಿತನನ್ನು ಕೊಲೆ ಮಾಡಲು ಒಳ ಸಂಚು ರೂಪಿಸಿದ್ದರು ಎಂದು ಹೇಳಿದರು.
ಆರೋಪಿಗಳು ಮೇ 18ರಂದು ರಾತ್ರಿ 9.30ಕ್ಕೆ ಎಪಿಎಂಸಿ ಯಾರ್ಡ್‌ನಲ್ಲಿರುವ ವೀಣಾ ಜಾಧವ ಅವರ ಗೋಡೌನ್ ಮುಂದೆ ರೋಹಿತ್ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಎದೆಗೆ, ಬೆನ್ನಿಗೆ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಜಜ್ಜಿ ಸಾಯಿಸಿದ್ದಾರೆ. ಬಳಿಕ ಶವವನ್ನು ಗೋಡೌನ್‌ನ ಸ್ಟೇರ್‌ಕೇಸ್ ಕೆಳಗಡೆಗೆ ಒಗೆದು ಹೋಗಿದ್ದರು ಎಂದು ಹೇಳಿದರು.
ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಎಪಿಎಂಸಿ ಠಾಣೆ ಪಿಎಸ್‌ಐ ಜ್ಯೋತಿ ಖೋತ್, ಪಿಎಸ್‌ಐ ಜೆ.ವೈ.ನದಾಫ್, ಸಿಬ್ಬಂದಿಗಳಾದ ಆಸೀಫ್ ಗುಡಗುಂಟಿ, ಐ.ಎಂ.ಬೀಳಗಿ, ಜಿ.ಐ.ಜಾಡರ, ಎಸ್.ಕೆ.ದುದಗಿ, ಆನಂದ ಹಿರೇಕುರುಬರ, ಸಂಜಯ ಬಿರಾದಾರ, ಶ್ರೀಶೈಲ ಬಜಂತ್ರಿ, ಆರ್.ಆರ್.ಜಾಧವ ಅವರು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.