ವಿಜಯಪುರ: ‘ಬಿಹಾರ ಮೂಲದ ಮುಸ್ಲಿಂ ಮೌಲ್ವಿಗಳು ನಗರದಲ್ಲಿ ಹಜ್, ಉಮ್ರಾ, ಪ್ರವಾಹ, ಬಡವರಿಗೆ ನೆರವಿನ ಹೆಸರಲ್ಲಿ ಹಣ ಸಂಗ್ರಹಿಸಿ ಮುಗ್ಧ ಮುಸ್ಲಿಮರಿಗೆ ಮೋಸ, ಶೋಷಣೆ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಬಿ.ಎಚ್. ಮಹಾಬರಿ ಆರೋಪಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಹಾರಿ ಮೌಲ್ವಿಗಳು ಹಣ ಸಂಗ್ರಹಿಸಿ, ಬಿಹಾರದಲ್ಲಿ ಆಸ್ತಿ ಮಾಡುತ್ತಿದ್ದಾರೆ. ಇವರ ವಿರುದ್ಧ ಶೀಘ್ರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇನೆ’ ಎಂದರು.
‘ಬಿಹಾರಿ ಮೌಲ್ವಿಗಳು ನಗರದಲ್ಲಿ ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಇಡಿ, ಲೋಕಾಯುಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಮುಸ್ಲಿಮರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೈರಿ ಅಲ್ಲ, ಆತ ವಿಜಯಪುರದಲ್ಲಿ ಹಿಂದು–ಮುಸ್ಲಿಂ ಕೋಮುವಾದದ ಮೂಲಕ ಚುನಾವಣೆ ಮಾಡಬಹುದು. ಆದರೆ, ಇಲ್ಲಿಯ ವ್ಯವಹಾರದಲ್ಲಿ ಹಿಂದು–ಮುಸ್ಲಿಂ ನಡುವೆ ಯಾವುದೇ ಕೋಮುವಾದವಿಲ್ಲ. ಎರಡು ಅಡಿ ದಾಡಿ ಬಿಟ್ಟು, ಟೊಪ್ಪಿ ಹಾಕಿದ ನಮ್ಮವರೇ ನಮಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಊರು ಉಳಿಸಿ
‘ವಿಜಯಪುರದಲ್ಲಿ ಮಳೆ ಬಂದು ನೀರು ನಿಂತು, ಜೊತೆಗೆ ಚರಂಡಿ ನೀರು ಸೇರಿ ಐದಾರು ಸಾವಿರ ಮನೆಗಳಿಗೆ ತೀವ್ರ ಹಾನಿಯಾಗಿದೆ. ಇಬ್ರಾಹಿಂ ರೋಜಾ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಅಸ್ತಿತ್ವಕ್ಕೆ ತೊಂದರೆಯಾಗಿದೆ. ಊರಿನ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಊರು ಉಳಿಸಲು ಆದ್ಯತೆ ನೀಡಬೇಕು’ ಎಂದು ಬಿ.ಎಚ್. ಮಹಾಬರಿ ಮನವಿ ಮಾಡದಿರು.
‘ಈ ಹಿಂದೆ 2009ರಲ್ಲಿ ಪ್ರವಾಹ, ಮಳೆಯಿಂದ ಸಮಸ್ಯೆ ಆಗಿತ್ತು. ಆಗ ಅಧಿಕಾರಿಗಳು ನಗರದಲ್ಲಿ ಮಳೆ ನೀರಿನಿಂದ ಸಮಸ್ಯೆ ಆಗುವುದನ್ನು ತಪ್ಪಿಸಲು ₹200 ಕೋಟಿ ಮೊತ್ತದ ಯೋಜನೆ ರೂಪಿಸಿದ್ದರು. ಆದರೆ, ಇದುವರೆಗೂ ಆ ಯೋಜನೆ ಅನುಷ್ಠಾನವಾಗಿಲ್ಲ’ ಎಂದು ದೂರಿದರು.
‘ನಗರದಲ್ಲಿರುವ ಐತಿಹಾಸಿಕ ಕೋಟೆಗೋಡೆ, ರಾಜಕಾಲುವೆ ಸ್ವಚ್ಛಗೊಳಿಸಬೇಕು, ಒತ್ತುವರಿ ತೆರವು ಮಾಡಬೇಕು, ಮಳೆ ನೀರು ನಗರದ ಹೊರಕ್ಕೆ ಹರಿದುಹೋಗಲು ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
‘ವಿಜಯಪುರ ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದೆ, ರಸ್ತೆಗಳು ವಿಸ್ತಾರವಾಗಿವೆ. ಆದರೆ, ಯಾವೊಂದು ರಸ್ತೆಗಳಿಗೂ ಗಟಾರಗಳಿಲ್ಲ, ಒಳ ಚರಂಡಿ ವ್ಯವಸ್ಥೆ ಸರಿಯಾಗಿ ಆಗಬೇಕು, ಐತಿಹಾಸಿಕ ನಗರ ಉಳಿಯಬೇಕು’ ಎಂದು ಹೇಳಿದರು.
‘ಶಾಸಕ ಯತ್ನಾಳ ನಗರದ ನಾಲ್ಕು ರಸ್ತೆ ಮಾಡಿ, ಮಂದಿ ಮರಳು ಮಾಡುತ್ತಿದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.