ADVERTISEMENT

ನಾಗರ ಪಂಚಮಿ; ಕ್ಷೀರಾಭಿಷೇಕ ಇಂದು

ಮಾರುಕಟ್ಟೆಯಲ್ಲಿ ನಾಗರ ಮೂರ್ತಿ, ಹೂವು–ಹಣ್ಣು ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 12:08 IST
Last Updated 12 ಆಗಸ್ಟ್ 2021, 12:08 IST
ವಿಜಯಪುರದ ಆಜಾದ್‌ ರಸ್ತೆಯಲ್ಲಿ ಗುರುವಾರ ಮೂರ್ತಿ ತಯಾರಕರಾದ ರಾಮೇಶ್ವರಿ ರುಕ್ಮಾಂಗದ ಕಾಳೆ ಅವರು ಮಣ್ಣಿನ ನಾಗರ ಮೂರ್ತಿಗಳ ಮಾರಾಟದಲ್ಲಿ ತೊಡಗಿದ್ದರು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಆಜಾದ್‌ ರಸ್ತೆಯಲ್ಲಿ ಗುರುವಾರ ಮೂರ್ತಿ ತಯಾರಕರಾದ ರಾಮೇಶ್ವರಿ ರುಕ್ಮಾಂಗದ ಕಾಳೆ ಅವರು ಮಣ್ಣಿನ ನಾಗರ ಮೂರ್ತಿಗಳ ಮಾರಾಟದಲ್ಲಿ ತೊಡಗಿದ್ದರು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಆಚರಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಿದ್ಧತೆ ನಡೆದಿದೆ.

ಕೋವಿಡ್‌ ಮೂರನೇ ಅಲೆಯ ಭೀತಿಯ ನಡುವೆಯೂ ನಗರದ ಮಾರುಕಟ್ಟೆಯಲ್ಲಿ ಗುರುವಾರ ಬಣ್ಣಬಣ್ಣದ ನಾಗರ ಮೂರ್ತಿ, ಬಟ್ಟಲು, ಹೂವು, ಹಣ್ಣುಗಳ ಖರೀದಿಯಲ್ಲಿ ಭಕ್ತರು ತೊಡಗಿದ್ದರು.

ಮನೆಗಳಲ್ಲಿ ಗುರುವಾರ ನಾಗರ ಮೂರ್ತಿಗಳಿಗೆ ಭಕ್ತಿ–ಭಾವದಿಂದ ಬೆಲ್ಲದ ನೀರರನ್ನು ಎರೆಯಲಾಗಿದ್ದು, ಶುಕ್ರವಾರ ನಾಗಪಂಚಮಿ ಅಂಗವಾಗಿ ನಾಗರ ಕಲ್ಲುಗಳಿಗೆ, ಹುತ್ತಗಳಿಗೆ ಹಾಲಿನ ಅಭಿಷೇಕ ಮಾಡಲು ಮಹಿಳೆಯರು ಅಣಿಯಾಗಿದ್ದಾರೆ.

ADVERTISEMENT

ನಾಗರ ಬನ, ನಾಗರ ಕಟ್ಟೆ, ನಾಗ ದೇವಾಲಯಗಳು, ಅಶ್ವತ್ಥ ಕಟ್ಟೆಗಳನ್ನು ಹಬ್ಬದ ಹಿಂದಿನ ದಿನವಾದ ಗುರುವಾರ ಸಂಜೆಯೇ ರಂಗೋಲಿ, ತಳಿರು–ತೋರಣದಿಂದ ಅಲಂಕೃತಗೊಳಿಸಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಹಿಳೆಯರು ಮನೆಗಳಲ್ಲಿ ಎಳ್ಳಿನ ಉಂಡೆ, ಶೇಂಗಾ ಉಂಡೆ, ರವಾ ಉಂಡೆ, ಅರಳಿನ ಉಂಡೆ ಸೇರಿದಂತೆ ವಿವಿಧ ರೀತಿಯ ಉಂಡೆಗಳನ್ನು ಪಂಚಮಿ ನೈವೇದ್ಯಕ್ಕೆ ಸಿದ್ಧಪಡಿಸಿಕೊಂಡಿದ್ದಾರೆ.

ನಾಗರ ಪಂಚಮಿಯು ಮಹಿಳೆಯರಿಗೆ ತವರು ಮನೆಯ ಸಂಬಂಧ ನೆನಪಿಸುವಹಬ್ಬವಾಗಿದೆ. ಅದಕ್ಕಾಗಿಯೇ ವಿಶೇಷವಾಗಿ ಪಂಚಮಿ ಸ್ತ್ರೀಯರ ಹಬ್ಬ ಎಂದೇ ಗುರುತಿಸಿಕೊಂಡಿದೆ.

***

ನಾಗರ ಮೂರ್ತಿಗೆ ತಗ್ಗಿದ ಬೇಡಿಕೆ

ವಿಜಯಪುರ ನಗರದ ಆಜಾದ್‌ ರಸ್ತೆಯ ಜಿಂಗಾರ ಓಣಿಯಲ್ಲಿ ತಲೆ, ತಲಾಂತರದಿಂದ ಪ್ರತಿ ವರ್ಷ ಪಂಚಮಿಯಂದು ಮಣ್ಣಿನಿಂದ ನಾಗರ ಮೂರ್ತಿ ತಯಾರಿಸಿ ಮಾರಾಟದಲ್ಲಿ ತೊಡಗಿರುವ ಗಣೇಶ ರುಕ್ಮಾಂಗದ ಕಾಳೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಕೋವಿಡ್‌ ಪರಿಣಾಮ ಎರಡು ವರ್ಷದಿಂದ ನಾಗರ ಮೂರ್ತಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಸುಮಾರು 200 ನಾಗರ ಮೂರ್ತಿ ಮಾಡಿ ಮಾರಾಟ ಮಾಡುತ್ತೇವೆ. ಒಂದು ಹೆಡೆ, ಐದು ಹೆಡೆಯ ಮೂರ್ತಿಗಳನ್ನು ಸಿದ್ಧಪಡಿಸುತ್ತೇವೆ. ಒಂದು ಅಡಿಯಿಂದ ಐದು ಅಡಿ ಎತ್ತರದ ನಾಗರ ಮೂರ್ತಿ ಮಾಡುತ್ತೇವೆ. ₹ 10ರಿಂದ ₹ 50ರ ವರೆಗೆ ಮಾರಟ ಮಾಡಲಾಗುತ್ತದೆ ಎಂದು ತಿಳಿಸಿದರು.

ನಾಗರ ಮೂರ್ತಿಗಳಿಗೆಪ್ರಥಮ ದಿನ ಬೆಲ್ಲದ ನೀರು, ಎರಡನೇ ದಿನ ಕೊಬ್ಬರಿ ಬಟ್ಟಲಿನಲ್ಲಿ ಹಾಲನ್ನು ಭಕ್ತರು ಎರೆಯುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ಬಳಿಕ ಈ ಮಣ್ಣಿನ ಮೂರ್ತಿಗಳನ್ನು ಮನೆ ಬಳಿ ಇರುವ ತುಳಸಿ ಅಥವಾ ಬೇರಾವುದೇ ಮರಗಳ ಬುಡದಲ್ಲಿ ಇಡುತ್ತಾರೆ. ಮಳೆಗೆ ಕರಗಿ ಹೋಗುತ್ತವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.