ವಿಜಯಪುರ: ‘ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಆಗಿಲ್ಲ, ಶಾಸಕ ವಿಠಲ ಕಟಕಧೋಂಡ ಅವರು ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿಲ್ಲ, ಕ್ಷೇತ್ರದ ಸಮಸ್ಯೆಗಳಿಗೆ ಉಸ್ತುವಾರಿ ಸಚಿವರು ಸ್ಪಂದಿಸಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂಬ ಬಿಜೆಪಿ ಮುಖಂಡ ರವೀಂದ್ರ ಲೋಣಿ ಆರೋಪ ಖಂಡನೀಯ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ ಶಾಸಕರು ನಾಗಠಾಣ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಇಲಾಖೆಗಳಿಂದ ₹700 ಕೋಟಿ ಅನುದಾನ ತಂದಿದ್ದಾರೆ’ ಎಂದು ಸಮರ್ಥಿಸಿಕೊಂಡರು.
‘ಜಿಲ್ಲಾ ಉಸ್ತುವಾರಿ ಸಚಿವರು ನಾಗಠಾಣ ಕ್ಷೇತ್ರದ ಕೆಲಸ ಮಾಡಿಲ್ಲ ಎಂಬ ಆರೋಪ ಖಂಡನೀಯ. ಇಡೀ ಜಿಲ್ಲೆಯನ್ನೇ ಅವರು ನೀರಾವರಿ ಮಾಡಿದ್ದಾರೆ, ಕೈಗಾರಿಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧದ ಟೀಕೆ ಸರಿಯಲ್ಲ’ ಎಂದರು.
‘ವಿಜಯಪುರ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹150 ಕೋಟಿ ವಿಶೇಷ ಅನುದಾನದಲ್ಲಿ ₹39 ಕೋಟಿ ಅನುದಾನ ನಾಗಠಾಣ ಕ್ಷೇತ್ರ ವ್ಯಾಪ್ತಿಗೆ ಬರುವ ಪಾಲಿಕೆ ವಾರ್ಡ್‌ಗಳಲ್ಲಿ ಖರ್ಚು ಮಾಡಲಾಗಿದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂದು ಹೇಳಿಕೊಂಡರೂ ಕೇವಲ ಅಲ್ಪಸಂಖ್ಯಾತ ಮುಸ್ಲಿಮರ ಪರ ಇದ್ದಾರೆ ಎಂಬ ಆರೋಪ ಖಂಡನೀಯ. ಅವರು ಸರ್ವ ಜಾತಿ, ಜನಾಂಗ, ಧರ್ಮಗಳ ಪರವಾಗಿದ್ದಾರೆ’ ಎಂದರು.
‘ನಾಗಠಾಣ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಅವರಂಥ ಸಮರ್ಥ ನಾಯಕರು ಸಿಗದ ಕಾರಣ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ರವೀಂದ್ರ ಲೋಣಿ ಹೇಳಿಕೆ ಸರಿಯಲ್ಲ. ನಾಗಠಾಣವು ಈ ಮೊದಲು ಬಳ್ಳೊಳ್ಳಿ ವಿಧಾನಭಾ ಕ್ಷೇತ್ರವಾಗಿದ್ದಾಗ ಶಾಸಕ, ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವಧಿಯಲ್ಲಿ ಹಾಗೂ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಮೈತ್ರಿಕೂಟದ ಜೆಡಿಎಸ್ ಶಾಸಕರು ಇದ್ದಾಗ ಯಾವೆಲ್ಲ ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಬಿಜೆಪಿ ಮುಖಂಡರು ಕ್ಷೇತ್ರದ ಜನತೆಗೆ ತಿಳಿಸಬೇಕು’ ಎಂದು ಸವಾಲು ಹಾಕಿದರು.
‘ತಿಡಗುಂದಿ ಬಳಿ ಕೈಗಾರಿಕೆ ಸ್ಥಾಪಿಸುವುದು ಬೇಡ ಎಂದು ಲೋಣಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಆ ಪ್ರದೇಶದಲ್ಲಿ ಕೊಳವೆಬಾವಿ ಕೊರೆದರೆ ಸಿಹಿ ನೀರು ಬದಲು, ಕಹಿ ನೀರು ಬರುತ್ತದೆ. ಇಂತಹ ಭೂಮಿ ಕೃಷಿಗಿಂತ ಕೈಗಾರಿಕೆೆಗೆ ಯೋಗ್ಯವಾಗಿದೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು’ ಎಂದರು.
ಯತ್ನಾಳ ಹೇಳಿಕೆ ಖಂಡನೀಯ:
ಶಾಸಕ ಬಸನಗೌಡ ಪಾಟೀಲ ಅವರು ಮುಸ್ಲಿಮರ ವಿರುದ್ಧ ನಿರಂತರ ವಾಗ್ದಾಳಿ, ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಲೋಣಿ, ‘ಮುಸ್ಲಿಮರನ್ನು ಸದಾ ಕಾಲ ಬೈಯ್ಯುತ್ತಿದ್ದರೆ ಶಾಸಕನಾಗಿರಬಹುದು ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಅವರ ಮುಸ್ಲಿಂ ವಿರೋಧಿ ಹೇಳಿಕೆ ಖಂಡನೀಯ’ ಎಂದರು.
‘2023ರ ವಿಧಾನಸಭಾ ಚುನಾವಣೆಯಲ್ಲೇ ವಿಜಯಪುರ ಮತದಾರರು ಅವರಿಗೆ ಬುದ್ದಿ ಕಲಿಸಿದ್ದರು. ಆದರೆ, ಹೊರಗಿನಿಂದ 25 ಸಾವಿರ ಅಕ್ರಮ ಮತದಾರರನ್ನು ಕರೆತಂದು, ಮತ ಕದ್ದು ಶಾಸಕರಾಗಿದ್ದಾರೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ವೈಜನಾಥ ಕರ್ಪೂರಮಠ, ಶಹಜಾನ್ ಮುಲ್ಲಾ, ಆರ್.ಡಿ.ಹಕ್ಕೆ, ಚಾಂದ್‌ಸಾಬ್ ಗಡಗಲಾವ, ಸಲೀಂ ಪಿರಜಾದೆ, ಅಬ್ದುಲ್ ರಜಾಕ್ ಹೊರ್ತಿ, ರವಿದಾಸ ಜಾಧವ, ಸೋಮನಾಥ ಕತ್ನಳ್ಳಿ, ಸುಭಾಶ ಕಾಲೇಬಾಗ, ಆನಂದ ಬಂಡಿ, ದೇಸು ಚವ್ಹಾಣ, ವಸಂತ ಹೊನಮೋಡೆ, ರಫೀಕ್ ಯಾತಗೀರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಶಾಸಕ ವಿಠಲ ಕಟಕಧೋಂಡ ಅವರು ಮೃದು ಸ್ವಾಭಾವದ ರಾಜಕಾರಣಿ ದಲಿತ ಎಂಬ ಕಾರಣಕ್ಕೆ ಅವರನ್ನು ಗುರಿಯಾಗಿಸಿ ಪತ್ರಿಕಾಗೋಷ್ಠಿ ಮೂಲಕ ಬಿಜೆಪಿಯವರು ತೇಜೋವಧೆ ಮಾಡಿರುವುದು ಖಂಡನೀಯ-ಮಲ್ಲಿಕಾರ್ಜುನ ಲೋಣಿಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.