ADVERTISEMENT

ಕಟ್ಟಡ ತ್ಯಾಜ್ಯ ಸುರಿಯುವಿಕೆಗೆ ಕೊನೆ ಎಂದು?

ಸುಭಾಸ ಎಸ್.ಮಂಗಳೂರ
Published 18 ಆಗಸ್ಟ್ 2019, 19:30 IST
Last Updated 18 ಆಗಸ್ಟ್ 2019, 19:30 IST
ವಿಜಯಪುರದ ಬಂಜಾರ್ ಕ್ರಾಸ್ ಹತ್ತಿರದ ಖಾಲಿ ಜಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿದಿರುವುದು
ವಿಜಯಪುರದ ಬಂಜಾರ್ ಕ್ರಾಸ್ ಹತ್ತಿರದ ಖಾಲಿ ಜಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿದಿರುವುದು   

ವಿಜಯಪುರ: ಐತಿಹಾಸಿಕ ನಗರಿ, ಗುಮ್ಮಟಗಳ ನಗರಿ ಎಂದೇ ಖ್ಯಾತಿಯಾಗಿರುವ ನಗರದಲ್ಲಿ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿದರೆ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿದಿರುವುದು ಕಣ್ಣಿಗೆ ರಾಚುತ್ತದೆ.

ಕಟ್ಟಡಗಳ ದುರಸ್ತಿ, ನವೀಕರಣ, ನಿರ್ಮಾಣ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ನಿರ್ಮಾಣ ಮತ್ತು ಕೆಡಹುವಿಕೆ ತ್ಯಾಜ್ಯವನ್ನು ನಾಗರಿಕರು ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಇಷ್ಟೇ ಅಲ್ಲ ಕೋಟೆಯ ಕಂದಕ ಮುಚ್ಚುವ ಅಪಾಯವೂ ಎದುರಾಗಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಪಕ್ಕ ಹಾದುಹೋಗಿರುವ ಕೋಟೆಯ ಗೋಡೆಯ ಬದಿಯಲ್ಲಿ ನೂರಾರು ಟ್ರಾಕ್ಟರ್ ಕಟ್ಟಡ ತ್ಯಾಜ್ಯವನ್ನು ಎಸೆಯಲಾಗಿದೆ. ಇದರಲ್ಲಿ ಕಲ್ಲು, ಸಿಮೆಂಟ್, ಜಲ್ಲಿ, ಗಾಜು, ಕಟ್ಟಿಗೆ, ಟೈಲ್ಸ್‌ ಎಲ್ಲವೂ ಸೇರಿವೆ. ಇದರಿಂದಾಗಿ ಕೋಟೆ ಗೋಡೆಯ ಪಕ್ಕದಲ್ಲಿರುವ ಕಂದಕ ಅರ್ಧದಷ್ಟು ಮುಚ್ಚಿಹೋಗಿದೆ. ಇದೇ ಪರಿಸ್ಥಿತಿ ಉಳಿದ ಕಡೆಯೂ ಇದೆ.

ADVERTISEMENT

ಕಟ್ಟಡ ತ್ಯಾಜ್ಯವನ್ನು ಸುರಿಯುವುದರಿಂದ ಕೆಲವಡೆ ನೀರಿನ ಮೂಲ, ಚರಂಡಿಗಳು ಕಟ್ಟಿಕೊಂಡಿರುವ ಉದಾಹರಣೆಗಳೂ ಇವೆ. ಕೆಲವು ಬಡಾವಣೆಯ ನಿವಾಸಿಗಳು ಈ ತ್ಯಾಜ್ಯದ ಮೇಲೆ ತಮ್ಮ ಮನೆಯ ಕಸವನ್ನು ಎಸೆಯುತ್ತಿದ್ದು, ಇದು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ತಾವು ಮಾಡದ ತಪ್ಪಿಗೆ ಸುತ್ತಲಿನ ಮನೆಗಳ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸೊಲ್ಲಾಪುರ ರಸ್ತೆಯ ಎರಡೂ ಬದಿಗಳಲ್ಲಿ ತ್ಯಾಜ್ಯವನ್ನು ಎಸೆದಿರುವುದನ್ನು ಕಾಣಬಹುದಾಗಿದೆ.

‘ನನ್ನ ಮನೆ, ನನ್ನ ಸುತ್ತಲಿನ ಆವರಣ ಸ್ವಚ್ಛವಾಗಿರಬೇಕು ಎಂದು ಬಯಸುವ ಜನರು ತಮ್ಮ ಮನೆಯ ಕಟ್ಟಡ ತ್ಯಾಜ್ಯವನ್ನು ಇನ್ನೊಂದು ಬಡಾವಣೆಯಲ್ಲಿ ತಂದು ಸುರಿಯುತ್ತಾರೆ. ಇದಕ್ಕಾಗಿ ಅವರು ರಾತ್ರಿ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ತ್ಯಾಜ್ಯವನ್ನು ವಿಲೇವಾರಿ ಮಾಡುವವರು ದುಪ್ಪಟ್ಟು ಹಣ ಪಡೆಯುತ್ತಾರೆ. ಮಾಲೀಕರು ಕಾರಣ ಕೇಳಿದರೆ, ಪಾಲಿಕೆ ಅಧಿಕಾರಿಗಳಿಗಳು ನೋಡಿದರೆ ದಂಡ ವಿಧಿಸುತ್ತಾರೆ ಎಂಬ ಸಬೂಬು ಹೇಳುತ್ತಾರೆ. ಪಾಲಿಕೆ ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳಬೇಕು ಎಂದು ಬಯಸುವುದು ಸಮಂಜಸವಲ್ಲ. ನಾಗರಿಕರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ತ್ಯಾಜ್ಯ ಸುರಿಯುವುದನ್ನು ಯಾರಾದರೂ ಗಮನಿಸಿದರೆ ಸುಮ್ಮನಿರದೆ ಪ್ರತಿಭಟಿಸಬೇಕು’ ಎಂದು ಹಿರಿಯ ನಾಗರಿಕ, ಬಂಜಾರ ನಗರದ ನಿವಾಸಿ ಸೋಮು ರಾಠೋಡ ಒತ್ತಾಯಿಸುತ್ತಾರೆ.

‘ಚರಂಡಿ ಕಟ್ಟಿಕೊಂಡಿದ್ದರೆ, ನೀರು ಪೂರೈಕೆಯಾಗದಿದ್ದರೆ ಪಾಲಿಕೆ ಅಧಿಕಾರಿಗಳನ್ನು ಶಪಿಸಬಹುದು. ಆದರೆ, ಖಾಲಿ ಜಾಗದಲ್ಲಿ ತ್ಯಾಜ್ಯ ಸುರಿಯುವುದನ್ನೂ ಪಾಲಿಕೆ ಗಮನಿಸಬೇಕು ಎಂದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ.

‘ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದಂತೆ ಅಧಿಸೂಚನೆ ಹೊರಡಿಸಲಾಗಿದೆ. ಮೂರು ಕಡೆ ಅನುಪಯುಕ್ತ ಗಣಿಗಳನ್ನು ಗುರುತಿಸಲಾಗಿದ್ದು, ಅಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಆದಾಗ್ಯೂ, ಕೆಲವರು ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಡಾ.ಔದ್ರಾಮ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.