ADVERTISEMENT

ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಪ್ರೊ.ಬಿ.ಕೆ.ತುಳಸಿಮಾಲ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 11:59 IST
Last Updated 17 ಆಗಸ್ಟ್ 2021, 11:59 IST
ಪ್ರೊ.ಬಿ.ಕೆ.ತುಳಸಿಮಾಲ
ಪ್ರೊ.ಬಿ.ಕೆ.ತುಳಸಿಮಾಲ   

ವಿಜಯಪುರ:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದುಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.

ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯದ ಆವರಣದಲ್ಲಿಯೂ ಕೂಡಾ ಪದವಿ ತರಗತಿಗಳಿಗೆ ಹೊಸ ಪಠ್ಯಕ್ರಮ ಅನ್ವಯವಾಗಲಿದೆ ಎಂದು ಹೇಳಿದರು.

ADVERTISEMENT

ಪದವಿ ಕಾಲೇಜುಗಳಲ್ಲಿ ಮೂರು ವರ್ಷಗಳ ಪದವಿ ಮತ್ತು ನಾಲ್ಕು ವರ್ಷಗಳ ಆನರ್ಸ್ ಪದವಿ ಕೋರ್ಸ್‍ಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಮೊದಲ ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿನಿ ಅನಿವಾರ್ಯ ಕಾರಣಕ್ಕೆ ಶಿಕ್ಷಣ ನಿಲ್ಲಿಸಿದರೆ ಅಂಥವರಿಗೆ ಒಂದು ವರ್ಷದ ಸರ್ಟಿಫಿಕೇಟ್ ನೀಡಲಾಗುವುದು. ಎರಡು ವರ್ಷ ಪೂರೈಸಿದ್ದರೆ ಡಿಪ್ಲೊಮಾ ಮತ್ತು ಮೂರು ವರ್ಷ ಪೂರ್ಣಗೊಳಿಸಿದರೆ ಸ್ನಾತಕ ಪದವಿ ಹಾಗೂ ನಾಲ್ಕು ವರ್ಷ ಪೂರೈಸಿದರೆ ಆನರ್ಸ್ ಸ್ನಾತಕ ಪದವಿ ನೀಡಲಾಗುವುದು ಎಂದರು.

ಈಗಾಗಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪದವಿ ತರಗತಿಗಳಿಗೆ ಪಠ್ಯಕ್ರಮ ರಚಿಸಲು ರಾಜ್ಯ ಮಟ್ಟದ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಈ ಸಮಿತಿಗಳಲ್ಲಿ ನಮ್ಮ ವಿವಿಯ ಪ್ರಾಧ್ಯಾಪಕರು ಇದ್ದಾರೆ. ಈ ಸಮಿತಿಗಳು ನೀಡುವ ಪಠ್ಯಕ್ರಮಗಳ ಆಧಾರದಲ್ಲಿ ಸ್ಥಳೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ನಮ್ಮ ವಿಶ್ವವಿದ್ಯಾನಿಲಯದ ಬಿಓಎಸ್ ಸಭೆಗಳಲ್ಲಿ ಈ ಪಠ್ಯಕ್ರಮಕ್ಕೆ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ವಿವಿಧ ವಿಷಯಗಳ ಬಿಓಎಸ್‌ಗಳನ್ನು ಪುನರ್ ರಚಿಸಲು ಕ್ರಮ ಕೈಕೊಳ್ಳಲಾಗಿದೆ. ಈ ಬಿಓಎಸ್‍ಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಬೋಧನೆ ಮಾಡುವ ವಿಷಯ ತಜ್ಞರಲ್ಲದೇ ಆಯಾ ವಿಷಯಗಳಿಗೆ ಸಂಬಂಧಿಸಿದ ಇತರೆ ತಜ್ಞರನ್ನು ಕೂಡಾ ಸದಸ್ಯರನ್ನಾಗಿ ನೇಮಕ ಮಾಡಲು ಕ್ರಮಕೈಕೊಳ್ಳಲಾಗುತ್ತಿದೆ. ಬಿಓಎಸ್‍ಗಳನ್ನು ಪುನರ್ ರಚಿಸಿದ ನಂತರ ಬಿಓಎಸ್ ಸದಸ್ಯರಿಗೆ ಪಠ್ಯರಚನೆ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಮಹಿಳಾ ವಿಶ್ವವಿದ್ಯಾನಿಲಯ ಈ ನೀತಿಯ ಅನುಷ್ಠಾನದ ಉಸ್ತುವಾರಿಗೆ ಒಂದು ಟಾಸ್ಕ್ ಫೋರ್ಸ್ ಅನ್ನು ರಚಿಸಿದೆ. ಜತೆಗೆ ಈ ಟಾರ್ಸ್‌ ಫೋರ್ಸ್‍ಗೆ ಮಾರ್ಗದರ್ಶನ ನೀಡುವುದಕ್ಕಾಗಿ ವಿವಿಯ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಈಗಾಗಲೇ ಈ ಸಂಬಂಧ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ವಿವಿಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಪ್ರಾಚಾರ್ಯರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರ ಜತೆಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ಮಹಿಳಾ ವಿವಿ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಮತ್ತು ವಿವಿಯಲ್ಲಿ ಪ್ರಸಕ್ತ ಸಾಲಿನಿಂದಲೇ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಒಂದು ಬ್ಲೂಪ್ರಿಂಟ್ ಸಿದ್ಧಪಡಿಸುವ ಕಾರ್ಯ ಭರದಿಂದ ನಡೆದಿದೆ ಎಂದರು.

ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ್ದು, ಆಎಲ್ಲಾ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡು ಮಹಿಳಾ ವಿಶ್ವವಿದ್ಯಾನಿಲಯ ಹೊಸ ಶಿಕ್ಷಣ ನೀತಿ ಜಾರಿಗೆ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲ ಸಚಿವೆ ಪ್ರೊ.ಆರ್‌.ಸುನಂದಮ್ಮ, ಮೌಲ್ಯ ಮಾಪನ ಕುಲಸಚಿವ ಪ್ರೊ.ಕೆ.ರಮೇಶ, ಹಣಕಾಸು ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಟಾಸ್ಕ್‌ಪೋರ್ಸ್‌ನ ಅಧ್ಯಕ್ಷ ಪ್ರೊ.ಪಿ.ಜಿ.ತಡಸದ, ಪ್ರೊ.ಓಂಕಾರ ಕಾಕಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

****

ಸಹಜವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿರೋಧಾಬಾಸ ವ್ಯಕ್ತವಾಗುತ್ತಿವೆ. ಈ ನೀತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚು, ಋಣಾತ್ಮಕ ಅಂಶಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು

–ಪ್ರೊ.ಬಿ.ಕೆ.ತುಳಸಿಮಾಲ,ಕುಲಪತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.