ADVERTISEMENT

ಪ್ರಜಾವಾಣಿ ಸಾಧಕರು; ಬೆನ್ನುಹುರಿ ಅಪಘಾತಕ್ಕೀಡಾದವರ ಬೆನ್ನೆಲುಬಾದ ನಿಮಿಷ ಆಚಾರ್ಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 9:50 IST
Last Updated 1 ಜನವರಿ 2022, 9:50 IST
ನಿಮಿಷ ಆಚಾರ್ಯ
ನಿಮಿಷ ಆಚಾರ್ಯ   

ವಿಜಯಪುರ:‌ ತಮ್ಮ 26ನೇ ವಯಸ್ಸಿನಲ್ಲಿ ಕಾರಿನಲ್ಲಿ ಪಯಣಿಸುವಾಗ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿ ತಮ್ಮ ಬೆನ್ನು ಹುರಿಯನ್ನು ಕಳೆದುಕೊಂಡರು ವಿಜಯಪುರದ ನಿಮಿಷ ಆಚಾರ್ಯ.

ವರ್ಷಾನುಗಟ್ಟಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೂಡ ಅವರ ಬೆನ್ನುಹರಿ ಸರಿಯಾಗಲಿಲ್ಲ. ಹಾಗಂತ ಮನೆಮಂದಿಗೆ ಹೊರಯಾಗದೇ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಜೊತೆಗೆ ತಮ್ಮಹಾಗೆ ಬೆನ್ನುಹುರಿ ಕಳೆದುಕೊಂಡು ಬಾಳುತ್ತಿರುವವರ ಬಗ್ಗೆ ಯೋಚಿಸಿ ಅವರ ಸೇವೆ ಮಾಡುತ್ತಾ ಬರುತ್ತಿದ್ದಾರೆ ನಿಮಿಷ ಆಚಾರ್ಯ.

ರಾಜ್ಯದಾದ್ಯಂತ ಸಂಚರಿಸಿ, ಬೆನ್ನುಹುರಿ ಅಪಘಾತಕ್ಕೀಡಾದವರ ಕಷ್ಟ ಹಾಗೂ ಆರೋಗ್ಯ, ಭವಿಷ್ಯದ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು 2006ರಲ್ಲಿ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಸಂಘವನ್ನು ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ ಈಗಲೂ ಅವರ ಸೇವೆಯಲ್ಲಿ ನಿರತವಾಗಿದ್ದಾರೆ.

ADVERTISEMENT

ತಮ್ಮ ಬೆನ್ನುಹುರಿ ಅಪಘಾತವನ್ನು ಮರೆತು, ತಮ್ಮಂತೆ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಮನೆ, ಮನೆ ಭೇಟಿ ಮಾಡಿ ಅವರ ವೈದ್ಯಕೀಯ ವೆಚ್ಚಕ್ಕೆ ಕ್ರಮವಹಿಸಿದ್ದಾರೆ. ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 250ಕ್ಕೂ ಹೆಚ್ಚು ಬೆನ್ನುಹುರಿ ಅಪಘಾತಕ್ಕೀಡಾದವರ ಮನೆಗಳಿಗೆ ಭೇಟಿ ನೀಡಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡುತ್ತಿದ್ದಾರೆ.

2006 ರಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ವೈದ್ಯಕೀಯ ಕಿಟ್‌ ನೀಡಿ, ಅದರ ಬಳಕೆ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಬೆನ್ನುಹುರಿ ಅಪಘಾತದಿಂದ ಬಳಲುತ್ತಿರುವವರ ಕುಟುಂಬದವರು, ಸಂಬಂಧಿಕರು, ಶೂಶ್ರೂಷಕರನ್ನು ಕರೆಯಿಸಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಜೊತೆ ಹೇಗೆ ವರ್ತಿಸಬೇಕು ಎಂದು ತಿಳಿಹೇಳುತ್ತಿದ್ದಾರೆ.

2012ರಿಂದ ಪ್ರತಿ ವರ್ಷ ಸೆಪ್ಟೆಂಬರ್‌ 5ರಂದು ವಿಶ್ವ ಬೆನ್ನುಹುರಿ ಅಪಘಾತಕ್ಕೊಳಗಾದವರ ದಿನವನ್ನು ತಮ್ಮ ಸ್ವಂತ ಖರ್ಚಿನಿಂದ ಆಚರಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ನೆರವಿಗೆ ಸರ್ಕಾರ, ಸಮಾಜ ಕೈಜೋಡಿಸುವಂತೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.