ವಿಜಯಪುರ: ವಿದ್ಯಾರ್ಥಿ ದೆಸೆಯಿಂದಲೂ ‘ಪ್ರಜಾವಾಣಿ’ ಪತ್ರಿಕೆಯನ್ನು ಓದುತ್ತಾ ಬಂದಿದ್ದೇನೆ. ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗದೇ ಓದುಗರಿಗೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸುದ್ದಿ, ಲೇಖನಗಳನ್ನು ನೀಡವು ಮೂಲಕ ಅದೇ ವಿಶ್ವಾಸವನ್ನು ಉಳಿಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅಭಿಪ್ರಾಯಪಟ್ಟರು.
ನ.15ರಿಂದ ಡಿಸೆಂಬರ್ 27ರ ವರೆಗೆ ಆಯೋಜಿಸಲಾಗಿರುವ ‘ಪ್ರಜಾವಾಣಿ’ ನ್ಯೂಸ್ ಕ್ವಿಜ್ ಪ್ರಚಾರಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೆಎಎಸ್, ಪಿಎಸ್‌ಐ, ಶಿಕ್ಷಕ, ಎಫ್‌ಡಿಎ, ಎಸ್‌ಡಿಎ ಮತ್ತಿತರರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಕೈಯಲ್ಲಿ ಇಂದಿಗೂ ‘ಪ್ರಜಾವಾಣಿ’ಯನ್ನೇ ನೋಡಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಒಂದು ರೀತಿ ಗೈಡ್ ಇದ್ದಂತೆ ಎಂದು ಹೇಳಿದರು.
‘ಮನೆ, ಕಚೇರಿಗೆ ಹತ್ತಾರು ಪತ್ರಿಕೆಗಳು ಬಂದರೂ ಆರಂಭದಲ್ಲಿ ನಾನು ಓದುವುರು ‘ಪ್ರಜಾವಾಣಿ’ಯನ್ನು ಬಳಿಕ ಉಳಿದ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತೇನೆ. ಪ್ರಜಾವಾಣಿಯಲ್ಲಿ ಸುದ್ದಿ ಬಂದರೆ ಮಾತ್ರ ಅದಕ್ಕೊಂದು ಖಚಿತತೆ, ಪಕ್ವತೆ ಇರುತ್ತದೆ. ಎಂದೂ ಮಸಾಲ, ಊಹಾಪೂಹಕ್ಕೆ ಆದ್ಯತೆ ನೀಡದೆ ನಂಬಲರ್ಹವಾದ ಪತ್ರಿಕೆಯಾಗಿ ಉಳಿದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸದ್ಯ ಸಾಕಷ್ಟು ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ನ್ಯೂಸ್ ಚಾನೆಲ್‌ಗಳು, ಟಿವಿ ಮಾಧ್ಯಮಗಳು ಬಂದಿವೆಯಾದರೂ ಓದಿಸಿಕೊಳ್ಳುತ್ತಿಲ್ಲ. ಇವುಗಳಲ್ಲಿ ಬರುವ ಸುದ್ದಿಗಳು ಸುಳ್ಳೊ, ನಿಜವೋ ನಂಬಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಖರ ಸುದ್ದಿಗಳಿಗಾಗಿ ‘ಪ್ರಜಾವಾಣಿ’ ಪತ್ರಿಕೆಯನ್ನು ಮಾತ್ರ ಅವಲಂಭಿಸುವಂತಾಗಿದೆ ಎಂದರು.
‘ಪ್ರಜಾವಾಣಿ’ ಏರ್ಪಡಿಸಿರುವ ನ್ಯೂಸ್ ಕ್ವಿಜ್ ಸ್ಪರ್ಧೆಯು ಓದುಗರಿಗೆ, ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲಿದೆ. ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ ‘ಅಗಣಿತ ರಾಮ’ವನ್ನುಇದೇ ಸಂದರ್ಭದಲ್ಲಿ ಸಿಇಒ ಗೋವಿಂದ ರೆಡ್ಡಿ ಬಿಡುಗಡೆಗೊಳಿಸಿದರು.
‘ಪ್ರಜಾವಾಣಿ’ ವಿಜಯಪುರ ನಗರ ಏಜೆಂಟ್ ಸುರೇಶ ಕಲಾದಗಿ, ಶಿವಾನಂದ ಹೂಗಾರ, ಮಲ್ಲಪ‍್ಪ ಮಂಗಣ್ಣವರ, ಪ್ರಸರಣ ವಿಭಾಗದ ಬಸಪ್ಪ ಮಗದುಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.