ADVERTISEMENT

ಬೆಳಗಾವಿ ಚುನಾವಣಾ ಕರ್ತವ್ಯಕ್ಕೆ ‘ಈಶಾನ್ಯ’ ಸಾರಿಗೆ‌

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಅಸಹಕಾರ

ಬಸವರಾಜ ಸಂಪಳ್ಳಿ
Published 16 ಏಪ್ರಿಲ್ 2021, 19:30 IST
Last Updated 16 ಏಪ್ರಿಲ್ 2021, 19:30 IST
ನಾರಾಯಣಪ್ಪ ಕುರುಬರ
ನಾರಾಯಣಪ್ಪ ಕುರುಬರ   

ವಿಜಯಪುರ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಿಂದ ಬೆಳಗಾವಿ ಲೋಕಸಭಾ ಉಪ ಚುನಾವಣಾ ಕರ್ತವ್ಯಕ್ಕೆ 224 ಬಸ್‌ಗಳನ್ನು ಒದಗಿಸುವ ಮೂಲಕ ವಿಭಾಗದ ಅಧಿಕಾರಿಗಳು ಮತ್ತು ಚಾಲಕ, ನಿರ್ವಾಹಕರು ಪ್ರಶಂಶೆಗೆ ಪಾತ್ರವಾಗಿದ್ದಾರೆ.

ಏಪ್ರಿಲ್‌ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಅಗತ್ಯ ಸಿಬ್ಬಂದಿ, ಮತ ಯಂತ್ರಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯಲು ಅಲ್ಲಿಯ ಜಿಲ್ಲಾಡಳಿತಕ್ಕೆ 508 ಬಸ್‌ಗಳು ಅಗತ್ಯವಿತ್ತು. ಈ ಸಂಬಂಧ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬಸ್ಸುಗಳನ್ನು ಒದಗಿಸುವಂತೆ ಚುನಾವಣಾ ಆಯೋಗ ಕೋರಿತ್ತು. ಆದರೆ, ಸಾರಿಗೆ ನೌಕರರ ಮುಷ್ಕರದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಚುನಾವಣಾ ಆಯೋಗದ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗದೇ ಕೈಚೆಲ್ಲಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗದ ನೆರವಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗವು ಅಗತ್ಯ ಬಸ್‌ಗಳನ್ನು ಒದಗಿಸಿ, ಚುನಾವಣೆಗೆ ಅಡಚಣೆಯಾಗದಂತೆ ನೋಡಿಕೊಂಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಬೆಳಗಾವಿ ಲೋಕಸಭಾ ಚುನಾವಣೆಗೆ ಅಗತ್ಯವಿರುವ ಬಸ್‌ಗಳನ್ನು ಒದಗಿಸುವಂತೆ ಏಪ್ರಿಲ್‌ 13ರಂದು ಬೆಳಗಾವಿ ಜಿಲ್ಲಾಡಳಿತ ಮನವಿ ಮಾಡಿತು. ಆ ಬಳಿಕ ನಾನು ಮತ್ತು ನಮ್ಮ ಅಧಿಕಾರಿಗಳು ಚಾಲಕ, ನಿರ್ವಾಹಕರನ್ನು ಸಂಪರ್ಕಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸಿದೆವು. ನಮ್ಮ ಮನವಿಗೆ ಸ್ಪಂದಿಸಿ ಸಿಬ್ಬಂದಿ ಕರ್ತವ್ಯಕ್ಕೆ ಬಂದ ಕಾರಣ ಚುನಾವಣೆಗೆ ಬಸ್‌ಗಳನ್ನು ಕಳುಹಿಸಲು ಸಾಧ್ಯವಾಯಿತು ಎಂದರು.

ADVERTISEMENT

ಅರಭಾವಿಗೆ 49, ಗೋಕಾಕಿಗೆ 50, ಬೈಲಹೊಂಗಲಕ್ಕೆ 40, ಸವದತ್ತಿಗೆ 41, ರಾಮದುರ್ಗಕ್ಕೆ 44 ಸೇರಿದಂತೆ ಒಟ್ಟು 224 ಬಸ್‌ಗಳನ್ನುಪೊಲೀಸ್‌ ಭದ್ರತೆಯಲ್ಲಿ ಕಳುಹಿಸಲಾಗಿದೆ. ಈ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೆಂಪು ಬಸ್‌ಗಳು ಚುನಾವಣಾ ಕರ್ತವ್ಯ ಮಾಡುವ ಮೂಲಕ ಸಂಸ್ಥೆಗೆ ಹೆಸರು ತಂದಿವೆ ಎಂದು ಹೇಳಿದರು.

***

ಬೆಳಗಾವಿ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ಚಾಲಕ, ನಿರ್ವಾಹಕರ ಸೇವೆಗೆ ಧನ್ಯವಾದ ಹೇಳುತ್ತೇನೆ

ನಾರಾಯಣಪ್ಪ ಕುರುಬರ, ವಿಭಾಗೀಯ ನಿಯಂತ್ರಣಾಧಿಕಾರಿ,ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗ

****

ನಾಲ್ಕು ಸಿಬ್ಬಂದಿ ಅಮಾನತು

ವಿಜಯಪುರ: ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋಧನೆ, ಅಡೆತಡೆ ಮಾಡಿದ ನಾಲ್ವರು ಸಿಬ್ಬಂದಿ(ಮೂವರು ಚಾಲಕರು, ಒಬ್ಬರ ಚಾಲಕ ಕಂ ನಿರ್ವಾಹಕ)ಗಳನ್ನು ಅಮಾನತು ಮಾಡಲಾಗಿದೆ ಎಂದುಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದರು.

‘ಪ್ರಜಾವಾಣಿ’ಗೆ ಮಾತನಾಡಿದ ಅವರು,ಕರ್ತವ್ಯಕ್ಕೆ ಹಾಜರಾದ ಎಂಟು ಸಿಬ್ಬಂದಿಯನ್ನು ಬೇರೆ, ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ವಿಜಯಪುರ ವಿಭಾಗ ವ್ಯಾಪ್ತಿಯಲ್ಲಿ ಇದುವರೆಗೆ ಮುಷ್ಕರ ಕೈಬಿಟ್ಟು2050 ಜನ ಹಾಜರಾಗಿದ್ದಾರೆ. ಶುಕ್ರವಾರ84 ಬಸ್‌ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.