ADVERTISEMENT

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಸೂಚನೆ

ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಅವ್ಯಾಹತ

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:15 IST
Last Updated 29 ಮೇ 2020, 14:15 IST
ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಾಲ್ಲೂಕು ಮಟ್ಟದ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದರು
ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಾಲ್ಲೂಕು ಮಟ್ಟದ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದರು   

ವಿಜಯಪುರ: ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು.

ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿರುವ ತಾಲ್ಲೂಕು ಕಾರ್ಯಪಡೆ ಸಮಿತಿ ಇನ್ನೂ ಚುರುಕಾಗಿ ಕಾರ್ಯನಿರ್ವಹಿಸುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ಇಂಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಾಗಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಇಬ್ಬರು ಅಧಿಕಾರಿಗಳನ್ನು 24X7 ನಿಯೋಜಿಸಿಸಿ, ತೀವ್ರ ನಿಗಾ ಇಡಲು ಉದ್ದೇಶಿಸಲಾಗಿದೆ ಎಂದರು.

ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ತಾಲ್ಲೂಕು ಟಾಸ್ಕ್‌ಫೋರ್ಸ್ ಸಮಿತಿಯು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಅಕ್ರಮ ಮರಳು ಗಣಿಗಾರಿಕೆ ಕುರಿತು ಬರುವ ದೂರುಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಅವಶ್ಯಕ ಸಂದರ್ಭದಲ್ಲಿ ಪೊಲೀಸರ ನೆರವು ಪಡೆಯಲು ತಿಳಿಸಿದರು.

ಇಂಡಿ, ಮೊರಟಗಿ ಚೆಕ್‍ಪೋಸ್ಟ್ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರನ್ನು ತಾಲ್ಲೂಕು ಟಾಸ್ಕ್‌ಫೋರ್ಸ್ ಸಮಿತಿ ಅಡಿಯಲ್ಲಿ ನೇಮಿಸಬೇಕು. ದೂರುಗಳು ಬಂದ ತಕ್ಷಣ ವಿಳಂಬವಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ತಾಳಿಕೋಟೆಯಲ್ಲಿ ತಹಶೀಲ್ದಾರ್‌ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಮತ್ತು ಸಮನ್ವಯತೆ ಕೊರತೆಯಿಂದ ಲೋಪವಾದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕೃಷ್ಣಾ ನದಿ ತೀರದ ವ್ಯಾಪ್ತಿಯಲ್ಲಿಯೂ ತೀವ್ರ ನಿಗಾ ಇಡುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ವಿಶೇಷವಾಗಿ ಬಬಲೇಶ್ವರ ತಹಶೀಲ್ದಾರ್‌ ಈ ಕುರಿತು ವಿಶೇಷ ನಿಗಾ ಇಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಕ್ರಮ ಗಣಿಗಾರಿಕೆ ತಡೆಗೆ ತಾಲ್ಲೂಕುವಾರು ಸಹಾಯವಾಣಿ ಮತ್ತು ವಿಚಕ್ಷಣಾ ತಂಡಗಳ ರಚನೆ ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವ ಕುರಿತಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ನೂತನ ಮರಳು ನೀತಿ ಅನ್ವಯ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಲೋಕೋಪಯೋಗಿ, ಕಂದಾಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.