ADVERTISEMENT

ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿಗೆ ಆಕ್ಷೇಪ

ಅರ್ಜಿ ಆಹ್ವಾನಿಸದೇ, ಕೃತಿಚೌರ್ಯ ಮಾಡಿದವರಿಗೆ ಯುವ ಪ್ರಶಸ್ತಿ ಆರೋಪ

ಬಸವರಾಜ ಸಂಪಳ್ಳಿ
Published 29 ನವೆಂಬರ್ 2020, 22:36 IST
Last Updated 29 ನವೆಂಬರ್ 2020, 22:36 IST
ಹಲಸಂಗಿ ಗೆಳೆಯರ ಪ್ರತಿಷ್ಠಾನದ ಲೊಗೊ
ಹಲಸಂಗಿ ಗೆಳೆಯರ ಪ್ರತಿಷ್ಠಾನದ ಲೊಗೊ   

ವಿಜಯಪುರ: ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2019 ಮತ್ತು 2020ನೇ ಸಾಲಿನ ರಾಜ್ಯ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿರುವ ಬೆನ್ನಲ್ಲೇ ಸಾಹಿತ್ಯ ವಲಯದಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಪ್ರಶಸ್ತಿ ಆಯ್ಕೆಗೆ ಯಾವುದೇ ಮಾನದಂಡವನ್ನು ಅನುಸರಿಸಿಲ್ಲ. ಅರ್ಜಿಆಹ್ವಾನಿಸದೇ, ಅರ್ಹರನ್ನು ಪರಿಗಣಿಸದೇ ತಮಗೆ ಬೇಕಾದವರಿಗೆ, ಪರಿಚಯಸ್ಥರಿಗೆ ಆಯ್ಕೆ ಸಮಿತಿಯವರು ಪ್ರಶಸ್ತಿ ನೀಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಕರೆಮಾಡಿ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲೆಯಆಲಮೇಲದ ಲೇಖಕ ಸಿದ್ಧರಾಮ ಉಪ್ಪಿನ, ‘ಆಯ್ಕೆ ಸಮಿತಿ ಸದಸ್ಯರು ಧಾರವಾಡದ ಪ್ರಭಾವಿ ಸಾಹಿತಿಯೊಬ್ಬರ ಮನೆಯಲ್ಲಿ ಕುಳಿತು ಅವರ ಅಣತಿಯಂತೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಅರ್ಹರನ್ನು ಪರಿಗಣಿಸಿಲ್ಲ’ ಎಂದು ದೂರಿದರು.

‘ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಜಿಲ್ಲೆಯ ಯಾರೊಬ್ಬರೂ ಸದಸ್ಯರಿಲ್ಲ. ಸಮಿತಿಯಲ್ಲಿ ಮೊದಲಿನಿಂದ ಇರುವವರೇ ಈಗಲೂ ಇದ್ದಾರೆ. ಅವರನ್ನು ಮೊದಲು ಬದಲಾಯಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೃತಿಚೌರ್ಯದ ಆರೋಪ ಇರುವವರನ್ನು 2019ರ ಯುವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸರಿಯಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಲೇಖಕಿಯೊಬ್ಬರುತಿಳಿಸಿದರು.

ದೂರು ಬಂದಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಷ್ಠಾನದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ‘ಪ್ರತಿಷ್ಠಾನದ ಪ್ರಶಸ್ತಿ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇದುವರೆಗೂ ನನಗೆ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ಬಂದರೆ ಕೂಲಂಕಷವಾಗಿ ಪರಿಶೀಲಿಸಲಾಗುವುದು. ತಪ್ಪು ಅಥವಾ ಲೋಪಗಳಾಗಿದ್ದರೆ ಸರಿಪಡಿಸಲಾಗುವುದು’ ಎಂದರು.

‘ಪ್ರಶಸ್ತಿ ಆಯ್ಕೆಯಲ್ಲಿ ಒಂದು ವೇಳೆ ಗಂಭೀರ ಸ್ವರೂಪದ ಲೋಪವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಪ್ರಶಸ್ತಿಯನ್ನು ಹಿಂಪಡೆಯಲಾಗುವುದು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸ್ಥಳೀಯರು ಇರಬೇಕು ಹಾಗೂ ಆಯ್ಕೆ ಸಮಿತಿ ಸಭೆ ಪ್ರತಿಷ್ಠಾನದ ಕೇಂದ್ರವಾದ ವಿಜಯಪುರದಲ್ಲಿ ನಡೆಯಬೇಕು ಎಂಬುದರ ಬಗ್ಗೆ ಈಗಾಗಲೇ ಸಮಿತಿಯ ಗಮನಕ್ಕೆ ತಂದಿದ್ದೇನೆ’ ಎಂದರು.

ಆಯ್ಕೆ ಸಮಿತಿ ಸದಸ್ಯರಲ್ಲೊಬ್ಬರಾದ ಬೆಳಗಾವಿಯ ಡಾ.ಗುರುಪಾದ ಮರಿಗುದ್ದಿ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿ ವಿಚಾರಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.