ADVERTISEMENT

ವಿಜಯಪುರ | ದರ ಕುಸಿತ: ರಸ್ತೆಗೆ ಉಳ್ಳಾಗಡ್ಡಿ ಸುರಿದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:25 IST
Last Updated 19 ಡಿಸೆಂಬರ್ 2025, 5:25 IST
ಬಸವನಬಾಗೇವಾಡಿ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ದರ ಕುಸಿತಕ್ಕೆ ಬೇಸತ್ತು ನೂರಾರು ರೈತರು ಎಪಿಎಂಸಿ‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬಸವನಬಾಗೇವಾಡಿ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ದರ ಕುಸಿತಕ್ಕೆ ಬೇಸತ್ತು ನೂರಾರು ರೈತರು ಎಪಿಎಂಸಿ‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.   

ಬಸವನಬಾಗೇವಾಡಿ : ಪಟ್ಟಣದ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ದರ ಕುಸಿತಕ್ಕೆ ಆಕ್ರೋಶಗೊಂಡ ನೂರಾರು ರೈತರು ಗುರುವಾರ ಎಪಿಎಂಸಿ ಮುಂಭಾಗದಲ್ಲಿರುವ ರಾಜ್ಯ ಹೆದ್ದಾರಿ ಮೇಲೆ ಉಳ್ಳಾಗಡ್ಡಿ ಸುರಿದು ರಸ್ತೆ ತಡೆ ನಡೆಸಿ ದಿಢೀರ್‌ ಪ್ರತಿಭಟನೆ ನಡೆಸಿದರು.

ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಪ್ರತಿನಿಧಿಸುವ ಬಸವನಬಾಗೇವಾಡಿ ಪಟ್ಟಣದ ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ದರ ಕುಸಿತಕ್ಕೆ ನ.27 ರಂದು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ದಿನಗಳ ಅಂತರದಲ್ಲೇ ಗುರುವಾರ ರೈತರು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಎಪಿಎಂಸಿಯಲ್ಲಿ ಗುರುವಾರದ ಉಳ್ಳಾಗಡ್ಡಿ ಲಿಲಾವಿಗೆ ಮಾಲು ತಂದಿದ್ದ ಬಳ್ಳಾವೂರದ ರೈತ ಅಕ್ಷಯ ಪವಾರ, ಶೇಖರ ಅಂಬಳನೂರ ಅವರು ಪ್ರತಿಭಟನೆಯಲ್ಲಿ ಮಾತನಾಡಿ, ‘ಬೆಂಗಳೂರಿನಲ್ಲಿ ₹3,500-₹4000 ದರಕ್ಕೆ‌ ಮಾರಾಟವಾದ ಮಾಲು ಬಸವನಬಾಗೇವಾಡಿ ಎಪಿಎಂಸಿಯಲ್ಲಿ ಕೇವಲ ₹500-₹1500 ಕ್ಕೆ ಕೇಳುತ್ತಿದ್ದಾರೆ. ಏಕಾಏಕಿ ಎರಡು‌ ಸಾವಿರದಷ್ಟು ದರ ಕುಸಿಯಲು ಹೇಗೆ ಸಾಧ್ಯ. ರೈತರಿಗೆ ಉಳ್ಳಾಗಡ್ಡಿ ಲಾಭವಿರಲಿ, ಪಾಕೀಟ್ ಮಾಡುವ 500 ಕೂಲಿಯೂ ದಕ್ಕುತ್ತಿಲ್ಲ. ಸಾವಿರಾರು ಖರ್ಚು ಮಾಡಿ ದೂರದ ಊರುಗಳಿಂದ ಮಾಲು ತಂದಿದ್ದೇವೆ. ನಮ್ಮ ಉಳ್ಳಾಗಡ್ಡಿ ಮಾಲಿಗೆ ನ್ಯಾಯಯುತ ಬೆಂಬಲ ಬೆಲೆ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ‌’ ಎಂದು ಹೆದ್ದಾರಿ ತಡೆ ಮುಂದುವರೆಸಿದರು. ಇದಕ್ಕೆ ಹಲವಾರು ರೈತರು ಬೆಂಬಲ ನೀಡಿ ಹೋರಾಟದಲ್ಲಿ ಭಾಗಿಯಾದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹಾಗೂ ಪಿಐ ಗುರುಶಾಂತ ದಾಶ್ಯಾಳ ಅವರು ಧಾವಿಸಿ ರೈತರಿಗೆ ಎಪಿಎಂಸಿ ಆವರಣದೊಳಗೆ ಪ್ರತಿಭಟನೆ ನಡೆಸುವಂತೆ ಮನವೊಲಿಸಿ‌ದರು. ಬಳಿಕ ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಅವರು ರ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಿದರು.  ರಾಜ್ಯದ ಪ್ರಮುಖ‌ ಮಾರುಕಟ್ಟೆಗಳ ಇಂದಿನ ಹಾಗೂ ಹಿಂದಿನ ಉಳ್ಳಾಗಡ್ಡಿ ದರಗಳ‌ ಕುರಿತು ಮಾಹಿತಿ ನೀಡಿದರು.‌ ರೈತರ ಮನವೊಲಿಸಿ ಅವರ ಸಮ್ಮುಖದಲ್ಲೇ ಎಪಿಎಂಸಿ ಆವರಣದಲ್ಲಿನ ಮಳಿಗೆಗಳ ಮುಂದೆ ಉಳ್ಳಾಗಡ್ಡಿ ಬಹಿರಂಗ ಲಿಲಾವು ಮಾಡಿಸಿದರು. ₹200 ರಿಂದ ₹2500 ರವರೆಗೂ ಉಳ್ಳಾಗಡ್ಡಿ ಮಾಲು‌ ಹರಾಜುಗೊಂಡವು. ಅಧಿಕಾರಿಗಳ ಸಮ್ಮುಖದಲ್ಲೇ ರೈತರು ತಮ್ಮ‌ ಮಾಲುಗಳ ಮಾರಾಟ ಮಾಡಿಕೊಂಡರು.

ಪ್ರತಿಭಟನೆಯಲ್ಲಿ ರೈತರಾದ ಅಕ್ಷಯ ಪವಾರ, ಶೇಖಪ್ಪ ಅಂಬಳನೂರ, ಪ್ರಕಾಶ ಮುರಾಳ, ವೀರಪ್ಪ ಮಡಿವಾಳರ, ಬಸು ಚೌರಿ, ಸಿದ್ದುಬಾ ಶಿವಾಜಿ ಜಾಧವ, ಸಿಖಿದ್ರಪ್ಪ ಗಂಗೂರ, ಬಸವರಾಜ ನಾಯಕ, ಶ್ರೀಶೈಲ ಮನಗೂಳಿ, ಜಗದೀಶ ನಿಕ್ಕಂ, ಮಹೇಶ ಹಾರಿವಾಳ, ನಿಂಗಪ್ಪ ಕುಳಗೇರಿ ಸೇರಿದಂತೆ ಹಲವಾರು ರೈತರು ಭಾಗಿಯಾಗಿದ್ದರು.

'ಕೆಲ ರೈತರಿಗೆ ಎಪಿಎಂಸಿ‌ ಅವರು ದರ ಹೆಚ್ಚಿಸುತ್ತಾರೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಬೇಡಿಕೆ ಮತ್ತು ಪೂರೈಕೆ ಮೇಲೆ ಬೆಲೆ ನಿರ್ಧಾರ ಆಗುತ್ತದೆ. ಬೆಂಗಳೂರಿನಲ್ಲಿ ಬುಧವಾರ ಉಳ್ಳಾಗಡ್ಡಿ ಮಾರುಕಟ್ಟೆ ದರ ಹೆಚ್ಚಾಗಿ ಗುರುವಾರ ಕಡಿಮೆಯಾಗಿದೆ. ಬೆಂಗಳೂರು ಮಾರುಕಟ್ಟೆ ದರ ಆಧರಿಸಿಯೇ ಎಲ್ಲಾ ಕಡೆ ದರ ತೆಗೆಯುತ್ತಿರುತ್ತಾರೆ. ಬಸವನಬಾಗೇವಾಡಿ ಎಪಿಎಂಸಿಯಲ್ಲಿ ರೈತರು ಒಂದು ಅಂಗಡಿಯಲ್ಲಿ ಮಾರಾಟವಾಗಿ ಎರಡನೇ ಅಂಗಡಿಯಲ್ಲಿ ದರ ವ್ಯತ್ಯಾಸ ಎನಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದಾಗ ನಾನು ಹಾಗೂ ನಮ್ಮ‌ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ‌ ಬಂದು ಎಂದಿನಂತೆ‌ ರೈತರ ಮುಂದೆಯೇ ಲಿಲಾವು ಮಾಡಿಸಿದ್ದೇವೆ' ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.