ADVERTISEMENT

‘ದೀಕ್ಷಾ ಭೂಮಿ’ಗೆ ಆನ್‌ಲೈನ್‌ ಅರ್ಜಿ

ನಗರದಿಂದಲೇ ಪ್ರವಾಸಕ್ಕೆ ವ್ಯವಸ್ಥೆ; ಡಿಸಿ ನೇತೃತ್ವದಲ್ಲಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 10:21 IST
Last Updated 12 ಸೆಪ್ಟೆಂಬರ್ 2019, 10:21 IST
ಮಹೇಶ ಪೊದ್ದಾರ
ಮಹೇಶ ಪೊದ್ದಾರ   

ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ‘ದೀಕ್ಷಾ ಭೂಮಿ’ಗೆ ಪ್ರಾರ್ಥನೆ ಸಲ್ಲಿಸಲು ತೆರಳುವ ಜಿಲ್ಲೆಯ ಯಾತ್ರಾರ್ಥಿಗಳಿಗೆ ಈ ಬಾರಿ ನಗರದಿಂದಲೇ ಎರಡು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ಮೂಲಕ ಬಸ್/ರೈಲಿನ ವ್ಯವಸ್ಥೆ ಮಾಡುತ್ತಿತ್ತು. ಆದರೆ, ಈ ಬಾರಿ ಆಯಾ ಜಿಲ್ಲೆಗಳಿಗೆ ಈ ಹೊಣೆಯನ್ನು ವಹಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಯಾತ್ರಿಗಳ ಆಯ್ಕೆಗೆ ಸಮಾಜ ಕಲ್ಯಾಣ ಇಲಾಖೆಯು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಯಾತ್ರಾರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಿದೆ.

ಅರ್ಹತೆಗಳು ಏನು?: ಯಾತ್ರೆಗೆ ತೆರಳುವವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು ಮತ್ತು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಇತರ ಸಮುದಾಯದವರೂ ಪ್ರವಾಸ ಕೈಗೊಳ್ಳಬಹುದಾಗಿದ್ದು, ಅಂತಹವರು ಅಂಬೇಡ್ಕರ್ ಚಿಂತನೆಗಳ ಬಗ್ಗೆ ಅರಿವು ಹೊಂದಿರಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರಬೇಕು.

ADVERTISEMENT

ನಾಗಪುರಕ್ಕೆ ಹೋಗಿ ಬರಲು ತಗಲುವ ವೆಚ್ಚವನ್ನು ಮಾತ್ರ ಸರ್ಕಾರ ಭರಿಸಲಿದ್ದು, ವಸತಿ ಮತ್ತು ಊಟದ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು ಎಂದು ಸೂಚಿಸಲಾಗಿದೆ.

ಆಯ್ಕೆ ವಿಧಾನ: ಯಾತ್ರೆಗೆ ತೆರಳ ಬಯಸುವವರು ಈಗಾಗಲೇ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಲಿದೆ. ಸೆ.15ರಂದು ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಸಭೆಯ ಬಳಿಕ ಆಯ್ಕೆಯಾದ ಯಾತ್ರಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಜಿಲ್ಲಾವಾರು ನಿಗದಿತ ಗುರಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾದಲ್ಲಿ, ವಯಸ್ಸಿನ ಜೇಷ್ಠತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

‘ನಮ್ಮ ಜಿಲ್ಲೆಗೆ 80 ಯಾತ್ರಾರ್ಥಿಗಳ ಗುರಿ ನಿಗದಿಪಡಿಸಲಾಗಿದೆ. ವಯಸ್ಸಿನ ಜೇಷ್ಠತೆ ಆಧಾರದ ಮೇಲೆ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಎರಡು ಬಸ್‌ಗಳ ಮೂಲಕ ಯಾತ್ರಾರ್ಥಿಗಳನ್ನು ದೀಕ್ಷಾ ಭೂಮಿಗೆ ಕರೆದೊಯ್ಯಲಾಗುವುದು’ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೊದ್ದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.