ADVERTISEMENT

ವಿದ್ಯುತ್ ಕಳವು ಆರೋಪಿಗಳಿಗೆ ದಂಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 13:31 IST
Last Updated 28 ಸೆಪ್ಟೆಂಬರ್ 2020, 13:31 IST

ವಿಜಯಪುರ: ವಿದ್ಯುತ್ ಕಳವಿಗೆಸಂಬಂಧಿಸಿದಂತೆ ಮುದ್ದೇಬಿಹಾಳ ತಾಲ್ಲೂಕಿನ ಬಿಜ್ಜೂರ ಗ್ರಾಮದ ಆರು ಜನ ಆರೋಪಿಗಳಿಗೆ ಹೈಕೋರ್ಟ್‌ ₹3,68,220 ದಂಡ ವಿಧಿಸಿದೆ.

ಬಿಜ್ಜೂರ ಗ್ರಾಮದ ಬಸಲಿಂಗಪ್ಪ ಕಮರಿ ಹಾಗೂ ಇತರೆ ಏಳು ಜನರ ಮೇಲೆ 2008ರಲ್ಲಿ ವಿದ್ಯುತ್‌ ಕಳವಿಗೆ ಸಂಬಂಧಿಸಿದಂತೆ ವಿಜಯಪುರದ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ಕೋರ್ಟ್, ಆರೋಪಿಗಳಿಗೆ ₹‌3,68,220 ದಂಡ ಹಾಗೂ ಅದಕ್ಕೆ ತಪ್ಪದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ 2012 ಸೆಪ್ಟೆಂಬರ್‌ 26ರಂದು ಆದೇಶ ಹೊರಡಿಸಿತ್ತು.

ADVERTISEMENT

ಜಿಲ್ಲಾ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಪ್ರಶ್ನಿಸಿಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್‌ ವಿಜಯಪುರದ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಎತ್ತಿ ಹಿಡಿದು, ಆರೋಪಿಗಳನ್ನು ಕೋರ್ಟ್‌ ಮುಂದೆ ಹಾಜರು ಪಡಿಸುವಂತೆ ಸೆ.24ರಂದು ಆದೇಶಿಸಿತ್ತು.

ಎಂಟು ಜನ ಆರೋಪಿಗಳಲ್ಲಿ ಈಗಾಗಲೇ ಇಬ್ಬರು ಸಾವಿಗೀಡಾಗಿರುವುದರಿಂದ ಇನ್ನುಳಿದ ಆರು ಜನ ಆರೋಪಿಗಳನ್ನುಹೆಸ್ಕಾಂ ಜಾಗೃತದಳದ ಎಸ್.ಪಿ ರವೀಂದ್ರ ಗಡಾದೆ ಅವರ ಮಾರ್ಗದರ್ಶನದಲ್ಲಿ ಎಂ.ಎನ್. ಶಿರಹಟ್ಟಿ ಹಾಗೂ ಮಹಿಳಾ ಪಿ.ಎಸ್.ಐ ಎಸ್.ವೈ. ಗಲಗಲಿ ನೇತೃತ್ವದಲ್ಲಿ ಆರು ಜನ ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದು, ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಆರೋಪಿಗಳು ದಂಡದ ಮೊತ್ತವನ್ನು ಕೋರ್ಟ್‌ನಲ್ಲಿ ಪಾವತಿ ಮಾಡಿ ಬಿಡುಗಡೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.