ವಿಜಯಪುರ: ತಾಳ ಹಾಕುತ್ತಾ, ತಂಬೂರಿ ಬಾರಿಸುತ್ತಾ, ವೀಣೆ ನುಡಿಸುತ್ತಾ, ಅಭಂಗಗಳ ಮೂಲಕ ವಿಠ್ಠಲನ ಭಜಿಸುತ್ತಾ, ಹಣೆಯ ಮೇಲೆ ಅಷ್ಟಗಂಧ, ಕೈಯಲ್ಲಿ ವಿಠ್ಠಲನ ಧ್ವಜ, ತಲೆಯ ಮೇಲೆ ತುಳಸಿ ಹೊತ್ತು ಪ್ರಮುಖ ಯಾತ್ರಾ ಸ್ಥಳ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿರುವ ಭಕ್ತರ ದಂಡನ್ನು ಈಗ ಕರ್ನಾಟಕ–ಮಹಾರಾಷ್ಟ್ರದ ಗಡಿಯಲ್ಲಿ ಕಾಣಬಹುದಾಗಿದೆ.
ಪ್ರತಿ ವರ್ಷ ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿ ಬಂತೆಂದರೆ ಸಾಕು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ, ತೆಲಂಗಾಣ ಪ್ರಾಂತಗಳಿಂದ ಲಕ್ಷಾಂತರ ಯಾತ್ರಾರ್ಥಿಗಳು ವಿಠಲನ ಕಾಣಲು ಪಂಢರಪುರದತ್ತ ಹೆಜ್ಜೆ ಹಾಕುವುದು ಸಂಪ್ರದಾಯ.
ನೂರಾರು ಕಿ.ಮೀ. ದೂರವನ್ನು ಬರಿಗಾಲಲ್ಲೇ ನಡೆದು ಸಾಗುವ ಭಕ್ತರ ಸಾಹಸ ಅಚ್ಚರಿ ಮೂಡಿಸುವಂತಹದು. ಹೆಣ್ಣು, ಗಂಡು, ಹಿರಿಯ, ಕಿರಿಯ, ಬಡವ, ಶ್ರೀಮಂತ ಎಂಬ ಬೇಧಬಾವವಿಲ್ಲದೇ ಊರಿಗೆ ಊರೇ ಒಂದಾಗಿ ವಿಠಲನ ದರ್ಶನಕ್ಕೆ ತೆರಳವುದು ಪರಂಪರಾಗತ ರೂಢಿಯಾಗಿದೆ.
ಸುಖಃ, ಶಾಂತಿ, ನೆಮ್ಮದಿ, ಆರೋಗ್ಯ, ಆಯುಷ್ಯ, ಸಿರಿತನ ಬಯಸಿ ಹರಕೆ ಹೊತ್ತ ಭಕ್ತರು ವಿಠಲ–ರುಕ್ಷ್ಮಿಣಿಯ ಸನ್ನಿಧಿಗೆ ಹತ್ತಾರು ವರ್ಷಗಳಿಂದ ಬಿಡದೇ ತೆರಳುವುದು ವಿಶೇಷ. ಆಧುನಿಕತೆಯ ಭರಾಟೆ ನಡೆವೆಯೂ ವಿಠಲನ ಬಳಿಗೆ ನಡೆದು ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗಿಲ್ಲ!
ಪಂಢರಪುರಕ್ಕೆ ಪಾದಯಾತ್ರೆ ಮೂಲಕ ತೆರಳುವ ಯಾತ್ರಾರ್ಥಿಗಳಿಗೆ ದಾರಿ ಉದ್ದಕ್ಕೂ ಉಚಿತ ಪ್ರಸಾದದ ವ್ಯವಸ್ಥೆಯನ್ನು ದಾನಿಗಳು, ವಿಠಲನ ಭಕ್ತರು ಮಾಡಿ, ತಾವೇ ಸ್ವತಃ ಅಡುಗೆ ತಯಾರಿಸಿ ಉಣಬಡಿಸುವುದು ವಿಶೇಷ.
ಅಂತೆಯೇ, ಈಗಾಗಲೇ ಪಂಢರಪುರದತ್ತ ತೆರಳಿರುವ ಭಕ್ತರು ಆಷಾಢ ಏಕಾದಶಿಯಂದು (ಜುಲೈ 17) ನಡೆಯಲಿರುವ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮುನ್ನಾ ಚಂದ್ರಭಾಗ ನದಿ(ಭೀಮಾ)ಯಲ್ಲಿ ಪುಣ್ಯ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಹಣತೆಯನ್ನು ತೇಲಿ ಬಿಡುತ್ತಾರೆ. ಬಳಿಕ ದಿನವಿಡಿ ಸರದಿಯಲ್ಲಿ ನಿಂತು ವಿಠಲ–ರುಕ್ಷ್ಮಿಣಿಯ ದರ್ಶನ ಪಡೆದು, ಪುನೀತರಾಗಲಿದ್ದಾರೆ.
ಭೀಮಾ ನದಿಯ ತಟದಲ್ಲಿರುವ ಪ್ರಾಚೀನ ತೀರ್ಥಕ್ಷೇತ್ರವಾದ ಪಂಢರಪುರವನ್ನು ‘ಭೂವೈಕುಂಠ’ವೆಂದು ಭಕ್ತಿಯಿಂದ ಕರೆಯಲಾಗುತ್ತದೆ. ವಿಠ್ಠಲ –ರುಕ್ಷ್ಮಿಣಿ ದೇವಾಲಯ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದ್ದು, ವಿಠಲ ಮತ್ತು ರುಕ್ಷ್ಮಿಣಿಯರ ಆಕರ್ಷಕ ಮೂರ್ತಿಗಳು ಭಕ್ತರ ಕಣ್ಮನ ಸೆಳೆಯುತ್ತವೆ.
ಭಕ್ತಿ ಸಂಪ್ರದಾಯದ ಆದ್ಯಪೀಠ ಎನಿಸಿರುವ ಪಂಢರಪುರವು ಮಹಾರಾಷ್ಟ್ರದ ಏಕದೇವತಾವಾದಿ ವಾರಕಾರಿ ಪಂಥ ಮತ್ತು ಕರ್ನಾಟಕದ ಹರಿದಾಸ ಪಂಥಗಳ ಕೇಂದ್ರಬಿಂದುವಾಗಿದೆ.
ಜಾತಿ, ಮತ ಬೇಧವಿಲ್ಲದೇ ಭಕ್ತಜನ ಇಲ್ಲಿ ಸೇರುತ್ತಾರೆ. ಮರಾಠಿ, ಕನ್ನಡ, ತೆಲಗು ಸೇರಿದಂತೆ ಹಲವು ಭಾಷೆಗಳ ಭಕ್ತರ ಸಂಗಮ, ಸಮನ್ವಯ ಕ್ಷೇತ್ರವಾಗಿ ಪಂಢರಪುರ ರಾರಾಜಿಸುತ್ತಿದೆ.
ದಾರಿ ಉದ್ದಕ್ಕೂ ದಾನಿಗಳಿಂದ ಉಚಿತ ಪ್ರಸಾದ ಭಕ್ತರಿಂದಲೇ ಅಡುಗೆ ತಯಾರಿ ಪಾದಯಾತ್ರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.