ADVERTISEMENT

ರಸ್ತೆ ಗುಂಡಿ ಮುಚ್ಚಿದ ಮಹಾನಗರ ಪಾಲಿಕೆ

‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು; ರಸ್ತೆ ತಾತ್ಕಾಲಿಕ ದುರಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:57 IST
Last Updated 16 ಸೆಪ್ಟೆಂಬರ್ 2021, 16:57 IST
ವಿಜಯಪುರ ನಗರದಲ್ಲಿ ಗುಂಡಿಬಿದ್ದು ಹದಗೆಟ್ಟಿರುವ ಬಾಗಲಕೋಟೆ ರಸ್ತೆಯನ್ನು ಗುರುವಾರ ಜೆಸಿಬಿಯಿಂದ ಸಮತಟ್ಟು ಮಾಡಿ, ಜಲ್ಲಿಕಲ್ಲು ಹಾಕುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿ
ವಿಜಯಪುರ ನಗರದಲ್ಲಿ ಗುಂಡಿಬಿದ್ದು ಹದಗೆಟ್ಟಿರುವ ಬಾಗಲಕೋಟೆ ರಸ್ತೆಯನ್ನು ಗುರುವಾರ ಜೆಸಿಬಿಯಿಂದ ಸಮತಟ್ಟು ಮಾಡಿ, ಜಲ್ಲಿಕಲ್ಲು ಹಾಕುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿ   

ವಿಜಯಪುರ: ನಗರದ ಹದಗೆಟ್ಟ ರಸ್ತೆಗಳ ಕುರಿತು ‘ಪ್ರಜಾವಾಣಿ’ಯಲ್ಲಿ ಗುರುವಾರ ವಿಶೇಷ ವರದಿ ಪ್ರಕಟವಾಗುತ್ತಿರುವಂತೆ ಎಚ್ಚೆತ್ತ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ಆರಂಭಿಸಿದ್ದಾರೆ.

ನಗರದ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಬಾಗಲಕೋಟೆ ಸರ್ಕಲ್‌ನಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿವಾಸದ ಎದುರು ಹಾದು ಆರ್‌ಟಿಒ ಕಚೇರಿ ವರೆಗಿನ ರಸ್ತೆಯಲ್ಲಿ ಗುಂಡಿಬಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದ ರಸ್ತೆಯನ್ನು ಜೆಸಿಬಿ ಯಂತ್ರದಿಂದ ಸಮತಟ್ಟು ಮಾಡಿ, ಗುಂಡಿಗಳಿಗೆ ಜಲ್ಲಿಕಲ್ಲುಗಳನ್ನು ತುಂಬುವ ಮೂಲಕ ವಾಹನ ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಗುರುವಾರ ಬೆಳಿಗ್ಗೆ 10 ಗಂಟೆ ಒಳಗಾಗಿ ಈ ರಸ್ತೆ ದುರಸ್ತಿ ಮಾಡಿರುವುದನ್ನು ಕಂಡ ಸಾರ್ವಜನಿಕರು ‘ಪ್ರಜಾವಾಣಿ’ಗೆ ಕರೆ ಮಾಡಿ ಧನ್ಯವಾದಗಳನ್ನು ಅರ್ಪಿಸಿದರು.

ADVERTISEMENT

‘ರಸ್ತೆ ದುರಸ್ತಿ ಮಾಡುವಂತೆ ಹತ್ತಾರು ಬಾರಿ ಹೇಳಿದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಆದರೆ, ‘ಪ್ರಜಾವಾಣಿ‘ಯಲ್ಲಿ ವರದಿ ಪ್ರಕಟವಾಗುತ್ತಿರುವಂತೆ ಎಚ್ಚೆತ್ತ ಅಧಿಕಾರಿಗಳು ತಾತ್ಕಾಲಿಕವಾಗಿಯಾದರೂ ರಸ್ತೆ ದುರಸ್ತಿ ಮಾಡಿರುವುದು ಶ್ಲಾಘನೀಯ. ಜನರ ಸಮಸ್ಯೆಗೆ ಸ್ಪಂದಿಸಿದ ಪತ್ರಿಕೆಗೆ ಅಭಿನಂದನೆಗಳು’ ಎಂದು ಗಣೇಶ ಪಾಟೀಲ, ಬಸವನ ಗೌಡ ಬಿರಾದಾರ, ರಮೇಶ ಚಿನಿವಾಲರ ತಿಳಿಸಿದರು.

‘ಹದಗೆಟ್ಟಿರುವ ಮುಖ್ಯ ರಸ್ತೆಗಳನ್ನು ಶೀಘ್ರವಾಗಿ ಹೊಸದಾಗಿ ನಿರ್ಮಿಸಲು ನಗರದ ಶಾಸಕರು, ಸಂಸದರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

***

ಹದಗೆಟ್ಟಿರುವ ರಸ್ತೆಗಳ ಮರುನಿರ್ಮಾಣ ಕಾಮಗಾರಿ ಮಳೆ ನಿಂತ ತಕ್ಷಣ ಆರಂಭಿಸಲಾಗುವುದು. ಈ ಸಂಬಂಧ ವರದಿ ಪ್ರಕಟಿಸಿ ಗಮನ ಸೆಳೆದ ಪ್ರಜಾವಾಣಿಗೆ ಧನ್ಯವಾದಗಳು

–ವಿಜಯ್‌ ಮೆಕ್ಕಳಕಿ

ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.