ಆಲಮಟ್ಟಿ: ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ವಿವಿಧ ಸಂಘಟನೆಗಳು, ಸಾರ್ವಜನಿಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಶನಿವಾರ ವಿವಿಧ ಮನವಿಗಳನ್ನು ಸಲ್ಲಿಸಿದರು.
ಪಿಪಿಪಿ ಕೈಬಿಡಲು ಆಗ್ರಹ
ವಿಜಯಪುರ ಜಿಲ್ಲೆಗೆ ಉದ್ದೇಶಿತ ಪಿಪಿಪಿ ಮಾದರಿಯನ್ನು ಕೈಬಿಟ್ಟು, ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯ ಪ್ರಮುಖರಾದ ಬಿ.ಭಗವಾನರೆಡ್ಡಿ, ಅಣ್ಣಾರಾಯ ಈಳಗೇರ ಮತ್ತೀತರರು ಮನವಿ ಸಲ್ಲಿಸಿದರು.
ಅಣೆಕಟ್ಟೆ ಎತ್ತರಿಸಿ
ರೈತರಿಗೆ ತೀವ್ರ ತೊಂದರೆಯಾಗಿರುವ ಹೊಲದ ದಾರಿ ಸಮಸ್ಯೆ ಇತ್ಯರ್ಥಪಡಿಸಲು ತಹಶೀಲ್ದಾರ್‌ಗೆ ಅಧಿಕಾರ ನೀಡಬೇಕು, ಆಲಮಟ್ಟಿ ಜಲಾಶಯವನ್ನು 524.256 ಮೀ.ಗೆ ಎತ್ತರಿಸಬೇಕು, ಕೆಬಿಜೆಎನ್ಎಲ್ ಎಂಡಿ ಕಚೇರಿ ಆಲಮಟ್ಟಿಯಲ್ಲಿಯೇ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು. ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಉಮೇಶ ವಾಲಿಕಾರ, ಹನುಮಂತ ಕಲಬುರ್ಗಿ ಇದ್ದರು.
ಅರಣ್ಯ ಇಲಾಖೆಯ ಕೋಟಿ ವೃಕ್ಷ ಅಭಿಯಾನದಲ್ಲಿ ಮೊದಲಿಗೆ ರೈತರಿಗೆ ವಿತರಿಸುತ್ತಿದ್ದ ರಿಯಾಯ್ತಿ ದರದಲ್ಲಿಯೇ ಈಗಲೂ ಸಸಿಗಳನ್ನು ವಿತರಿಸಬೇಕು, ಸ್ಥಗಿತಗೊಂಡ ಈ ಯೋಜನೆ ಮರು ಪ್ರಾರಂಭಿಸಬೇಕು, ಯುಕೆಪಿ ಯೋಜನಾ ಸಂತ್ರಸ್ತರಿಗೆ ಸ್ಥಳೀಯ ಕಾಮಗಾರಿಗಳಲ್ಲಿ ಆದ್ಯತೆ ನೀಡಬೇಕು, ಬಹುವರ್ಷದಿಂದ ಆಲಮಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವರ್ಗಾಯಿಸಬೇಕು ಎಂದು ತಾಲ್ಲೂಕು ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ತಿರುಪತಿ ಬಂಡಿವಡ್ಡರ, ವಿಠ್ಠಲ ಬಂಡಿವಡ್ಡರ, ಶಿವಪ್ಪ ಬೆನಕಟ್ಟಿ, ಗುರುರಾಜ ವಡ್ಡರ ಮನವಿ ಅರ್ಪಿಸಿದರು.
ಕಮ್ಮಾರ ಕಲ್ಲಯ್ಯ ಜಯಂತಿ
ಕಂಬಾರ (ಕಮ್ಮಾರ) ಸಮುದಾಯದ ಕಮ್ಮಾರ ಕಲ್ಲಯ್ಯ ಜಯಂತಿ ಆಚರಿಸಬೇಕು, ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು, ಕಮ್ಮಾರದಲ್ಲಿಯೇ ಇರುವ ನಾನಾ ಪಂಗಡಗಳನ್ನು ಒಂದೇ ವರ್ಗದಡಿ ಬರುವಂತೆ ಆದೇಶಿಸಬೇಕು, ಕೈಗಾರಿಕೆ ಇಲಾಖೆಯಿಂದ ಕಮ್ಮಾರರಿಗೆ ₹ 50 ಸಾವಿರ ಧನಸಹಾಯ ಒದಗಿಸಬೇಕು ಎಂದು ಕಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯಲ್ಲಪ್ಪ ಕಂಬಾರ, ರವೀಂದ್ರ ಕಮ್ಮಾರ, ಮಲ್ಲಿಕಾರ್ಜುನ ಕಂಭಾರ, ಹನುಮಂತ ಕಂಬಾರ ಮನವಿ ಸಲ್ಲಿಸಿದರು.
ಲಂಬಾಣಿಗರ ವಿರೋಧ
ಅವೈಜ್ಞಾನಿಕವಾಗಿ ಮಾಡಿರುವ ಒಳಮೀಸಲಾತಿಯಿಂದ ಲಂಬಾಣಿಗರಿಗೆ ಅನ್ಯಾಯವಾಗಿದೆ ಅದಕ್ಕಾಗಿ ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿಯವರೆಗೂ ಕಾಯ್ದು ನಂತರ ಹೋಲಿಕೆ ಮಾಡಿ ಜಾರಿಗೆ ತನ್ನಿ ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಬಸವರಾಜ ಚವ್ಹಾಣ, ಬಾಳು ರಾಠೋಡ, ಮಲ್ಲೇಶಿ ರಾಠೋಡ ಮನವಿ ಸಲ್ಲಿಸಿದರು.
ಗೋಮಾಳ ರಕ್ಷಣೆ
ಪ್ರತಿ ಗ್ರಾಮಗಳಲ್ಲಿರುವ ಗೋಮಾಳ ಜಾಗವನ್ನು ಸರ್ಕಾರ ಪರಭಾರೆ ಮಾಡದೇ, ಅತಿಕ್ರಮಣ ಮಾಡದಂತೆ ತಡೆಗಟ್ಟಬೇಕು, ಆ ಪ್ರದೇಶದಲ್ಲಿ ಹುಲ್ಲು ಬೆಳೆಸಿ, ಕುರಿ, ಗೋವು ಕಾಯಲು ಅನುಕೂಲ ಕಲ್ಪಿಸಬೇಕು ಎಂದು ತೊರಗಿ ಗ್ರಾಮದ ಬೀರಪ್ಪ ಜುಮನಾಳ ಮನವಿ ಮಾಡಿದರು.
ಅನುದಾನಕ್ಕೆ ಒಳಪಡಿಸಿ
1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ವೇತನಾನುದಾನ ಭಾಗ್ಯ ನೀಡಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ, ನಿಡಗುಂದಿ ತಾಲ್ಲೂಕು ಅಧ್ಯಕ್ಷ ಸೋಮಶೇಖರ ನಾಗರಬೆಟ್ಟ ಮತ್ತೀತರರು ಮನವಿ ಅರ್ಪಿಸಿದರು.
ಅಲೆಮಾರಿಗಳಿಂದ ಮನವಿ
ಅಲೆಮಾರಿ, ಅರೆಅಲೆಮಾರಿ ಜನಾಂಗವಾಗಿರುವ ಬೇಡ ಜಂಗಮ, ಕಾಡು ಸಿದ್ಧರು, ಸುಡುಗಾರು ಸಿದ್ಧರು, ಶಿಳ್ಳೆಕ್ಯಾತರು, ಕೊರಮ, ಕೊರಚ ಇತರೆ ಜನಾಂಗಕ್ಕೆ ಪ್ರತ್ಯೇಕ ಶೇ 3ರಷ್ಟು ಮೀಸಲಾತಿ ನೀಡಲು ಬಸಯ್ಯ ಗಣಾಚಾರಿ, ತುಕಾರಾಮ ಕಟ್ಟಿಮನಿ, ಡೋಂಗ್ರಿ ಭಜಂತ್ರಿ, ಗಂಗಪ್ಪ ಕುಂಚಿಕೊರವರ, ಯಲ್ಲಪ್ಪ ಭಜಂತ್ರಿ ಮನವಿ ಮಾಡಿದರು.
ಕಾಯಂಗೆ ಮನವಿ
ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಕಾಯ್ದೆಯಡಿ ಪ್ರಸ್ತುತ ಆಲಮಟ್ಟಿಯಲ್ಲಿ ದಿನಗೂಲಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ದಿನಗೂಲಿಗಳನ್ನು ಕಾಯಂ ಮಾಡಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ವಿರೂಪಾಕ್ಷಿ ಮಾದರ, ಬಸಪ್ಪ ಗುಡಿಮನಿ ಮನವಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.