ADVERTISEMENT

ಜೀವಂತ ದೇವಾಲಯಗಳು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:13 IST
Last Updated 31 ಆಗಸ್ಟ್ 2018, 15:13 IST

ಸಣ್ಣ ಬೀಜದಲ್ಲಿ ದೊಡ್ಡ ಮರ ಅಡಗಿರುವಂತೆ, ಸಾಮಾನ್ಯ ಮನುಷ್ಯನಲ್ಲಿ ಮಹಾದೇವನಾಗುವ ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಹೊರತರಲು ಸಾಧನೆ ಬೇಕು. ಸಾಧನೆಯೇ ಸಿದ್ಧಿಯ ಮಾರ್ಗ. ಸಾಧನಾ ಮಾರ್ಗದಲ್ಲಿ ಅಡೆತಡೆ ಬಂದರೆ ನಿಲ್ಲಬಾರದು, ಅವುಗಳನ್ನು ದಾಟಿ ಮುನ್ನಡೆಯಬೇಕು. ಸಾಧನೆಯಲ್ಲಿ ಕೊರತೆ ಉಂಟಾದರೆ ಸಿದ್ಧಿ ಸಿಗದು. ಭೂಮಿ, ನೀರು, ಗಾಳಿ ಸಿಕ್ಕರೆ ಬೀಜ ಬೆಳೆಯುತ್ತದೆ. ಅದು ದೊಡ್ಡದಾಗಲು ಒಂದಿಷ್ಟು ರಕ್ಷಣೆ ಬೇಕಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಬೀಜಕ್ಕೆ ಬೆಳೆಯಬೇಕು ಎಂಬ ಉತ್ಸಾಹ ಅಗತ್ಯ. ಎಲ್ಲ ಇದ್ದು ಬೆಳೆಯುವ ಉಮೇದು ಇರದಿದ್ದರೆ ಅದು ದೊಡ್ಡ ಮರವಾಗುವುದಿಲ್ಲ.

ಎಲ್ಲರ ಹೃದಯದಲ್ಲೂ ದಿವ್ಯತೆ ಇದೆ. ಆತ್ಮವಿಶ್ವಾಸ ಹಾಗೂ ನಿರಂತರ ಸಾಧನೆಯಿಂದ ಅದು ಪ್ರಕಟವಾಗುತ್ತದೆ. ದಿವ್ಯತೆಯೇ ದೇವರು. ದೇವರು ಇರುವ ಸ್ಥಾನವೇ ದೇವಾಲಯ. ದಿವ್ಯತೆ-ದೇವಾನುಭವವನ್ನು ಸಾಧಿಸಿದ ಮನುಷ್ಯ ಎಂದರೆ, ಆತ ನಡೆಯುವ-ನುಡಿಯುವ ಜೀವಂತ ದೇವರೇ ! ಆತನ ದೇಹವೇ ದೇವಾಲಯ. ದೇಹದಲ್ಲಿನ ದೇವತ್ವವನ್ನು ಪ್ರಕಟಗೊಳಿಸುವುದೇ ಯೋಗ. ಅದನ್ನು ದಿವ್ಯಾನುಭೂತಿ, ದೇವಾನುಭವ ಎಂದೆಲ್ಲ ಕರೆಯುತ್ತಾರೆ. ಇಲ್ಲಿ ಯಾರೂ ಸಾಮಾನ್ಯರಲ್ಲ. ಎಲ್ಲರಿಗೂ ತಮ್ಮಲ್ಲಡಗಿರುವ ದೇವರನ್ನು ಹೊರತರುವ ಶಕ್ತಿ ಇದೆ. ದೈವತ್ವಕ್ಕೇರಿದ ಮನುಷ್ಯನ ಮಾತು ಮಂತ್ರವಾಗುತ್ತದೆ. ಆತನ ನೋಟದಲ್ಲಿ ಎಲ್ಲವೂ ದೇವರೆ! ಆತನ ಭಾವದಲ್ಲಿ ಅದ್ಭುತ ಸಾಮರ್ಥ್ಯವಿರುತ್ತದೆ. ಆತ ಶಕ್ತಿಯ ಪುಂಜವೇ ಆಗಿರುತ್ತಾನೆ. ಇಂಥ ಸಿದ್ಧಿ ಪಡೆಯಲು ಆತ್ಮವಿಶ್ವಾಸ ಹಾಗೂ ನಿರಂತರ ಸಾಧನೆ ಬೇಕು.

ನಮ್ಮ ಬೆರಳುಗಳು ಇರುವುದು ಬಂಗಾರದ ಉಂಗುರ ಹಾಕಲು ಅಲ್ಲ; ಸುಂದರವಾದ ಕಾರ್ಯಗಳನ್ನು ಮಾಡಲು. ಬಂಗಾರ ಇದ್ದರೆ, ಯಾರಾದರೂ ಕದಿಯುವರೇನೋ ಎಂಬ ಭಯ. ಬಂಗಾರವಿಲ್ಲದ ಮನುಷ್ಯ ಸದಾ ನಿರ್ಭಯ. ಸುಂದರವಾದ ಗಿಳಿಗೆ ಪಂಜರದಲ್ಲಿ ಸಿಕ್ಕಿಬೀಳುವ ಆತಂಕ. ಕುರೂಪಿಯಾದ ಗೂಬೆಗೆ ಆ ಭಯವಿಲ್ಲ. ಶ್ರೀಮಂತರ ಮನೆ ಬಾಗಿಲುಗಳು ಯಾವಾಗಲೂ ಮುಚ್ಚಿರುತ್ತವೆ. ಬಡವರ ಗುಡಿಸಲುಗಳಿಗೆ ಬಾಗಿಲುಗಳೇ ಇರುವುದಿಲ್ಲ. ಸಿರಿವಂತ-ಬಡವ, ಸೌಂದರ್ಯ-ಕುರೂಪ, ಮೇಲು-ಕೀಳು ಎಂಬುದೆಲ್ಲ ನಮ್ಮ ದೃಷ್ಟಿಕೋನ. ಎಲ್ಲೆಲ್ಲೂ ದೇವರನ್ನೇ ಕಾಣುವ... ದೇವರೇ ಆಗಿರುವ ಮನುಷ್ಯನ ದೃಷ್ಟಿ ವಿಶಾಲವಾಗಿರುತ್ತದೆ. ದೇವರಾಗುವುದು ಎಲ್ಲರಿಗೂ ಸಾಧ್ಯವಿದೆ. ಎಲ್ಲರಲ್ಲೂ ಇರುವ ಆ ಸಾಮರ್ಥ್ಯದ ಅನಾವರಣ ಆಗಬೇಕು ಅಷ್ಟೇ !

ADVERTISEMENT

ಸಂಗ್ರಹ: ಸುಭಾಸ ಯಾದವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.