ಸೋಲಾಪುರ: ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಆದಿವಾಸಿಗಳ ಸಮಸ್ಯೆ ಕುರಿತು ಸಭೆ ನಡೆಸಿದರು.
ಸೋಲಾಪುರದ ಅನುಸೂಚಿತ ಪಂಗಡ ಮೋರ್ಚಾದ ಪಶ್ಚಿಮ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಜ್ಞಾನೇಶ್ವರ ಭೋಸಲೆ ಹಾಗೂ ಕಾರ್ಯಕಾರಿಣಿ ಸದಸ್ಯೆ ರಾಜಶ್ರೀ ಚವ್ಹಾಣ ಅವರು ಸಭೆಯಲ್ಲಿ ಪಾಲ್ಗೊಂಡು, ವಿವಿಧ ಸಮಸ್ಯೆ ಕುರಿತು ಚರ್ಚಿಸಿದರು.
‘ಆದಿವಾಸಿ ಪಾರಧಿ ಸಮಾಜದವರಿಗೆ ಅಂಟಿದ ಅಪರಾಧಿ ಹಣೆಪಟ್ಟಿ ತೆಗೆದುಹಾಕಬೇಕು. ಸಮಾಜದ ಉನ್ನತಿಗಾಗಿ ಕೃಷಿ ಭೂಮಿ, ವಸತಿ, ಶಿಕ್ಷಣ ಹಾಗೂ ಉದ್ಯೋಗ ಸೌಲಭ್ಯ ನೀಡಬೇಕು. ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರಪತಿ ಮುರ್ಮು ಅವರು, ‘ಆದಿವಾಸಿಗಳಿಗೆ ಹಕ್ಕು–ಅಧಿಕಾರ ನೀಡಿ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆಯುವ ಸಭೆಗೆ ತಮ್ಮನ್ನು ಕರೆಯಲಾಗುವುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರಪತಿ ಅವರಿಗೆ ಸೋಲಾಪುರ ಚಾದರ ಹಾಗೂ ಶಿವಯೋಗಿ ಸಿದ್ದರಾಮೇಶ್ವರ ಮೂರ್ತಿ ನೀಡಿ ಸನ್ಮಾನಿಸಲಾಯಿತು.
ಸೋಲಾಪುರದ ಪ್ರತಿನಿಧಿಗಳಾದ ರಾಜಶ್ರೀ ಕಾಳೆ, ವಿಜಯಾ ಭೋಸಲೆ, ಸುದರ್ಶನ ಶಿಂಧೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.