ADVERTISEMENT

ಖಾಸಗಿ ಆಸ್ಪತ್ರೆ: ಶೇ 50ರಷ್ಟು ಹಾಸಿಗೆ ಮೀಸಲು

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 14:25 IST
Last Updated 20 ಏಪ್ರಿಲ್ 2021, 14:25 IST

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಕೊರೊನಾ ದೃಢಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಅವಶ್ಯಕವಿದ್ದರೆ ಮಾತ್ರ ಜಿಲ್ಲಾಸ್ಪತ್ರೆಯ ಸಹಾಯವನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದದ ಮೂಲಕ ಅವರು ಮಾತನಾಡಿದರು.

ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಜಿಲ್ಲಾ ಆಸ್ಪತ್ರೆಯಿಂದ ಒಂದು ತಂಡವನ್ನು ರಚನೆ ಮಾಡಿಕೊಂಡು, ಪ್ರತಿಯೊಂದು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸರ್ಕಾರದ ನಿಯಮದಂತೆ ಶೇ 50ರಷ್ಟು ಬೆಡ್‍ಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ADVERTISEMENT

ಜನರಲ್ ಬೆಡ್, ಐಸಿಯು ಬೆಡ್, ಆಕ್ಸಿಜನ ಹಾಗೂ ವೆಂಟಿಲೇಟರ್‌ಗಳ ಸಂಖ್ಯೆಯ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಪ್ರತಿನಿತ್ಯ ತೆಗೆದುಕೊಂಡ ಅಂಕಿಸಂಖ್ಯೆಗಳನ್ನು ತಂತ್ರಾಂಶದ ಮೂಲಕ ಪ್ರತಿಯೊಂದು ಆಸ್ಪತ್ರೆಗಳಲ್ಲಿ ದಾಖಲಾದ ಹಾಗೂ ಡಿಸ್ಚಾರ್ಜ್ ಆದ ಕೊರೊನಾ ಪ್ರಕರಣಗಳನ್ನು ತಂತ್ರಾಂಶದ ಮೂಲಕ ಅಂಕಿ–ಸಂಖ್ಯೆಯನ್ನು ಪ್ರತಿದಿನ ದಾಖಲೆ ಇಡಬೇಕು ಹಾಗೂ ಸಂಬಂಧಪಟ್ಟ ವೆಬ್‍ಸೈಟ್ ಗಳಲ್ಲಿ ಪ್ರತಿದಿನ ಮಾಹಿತಿಯನ್ನು ದಾಖಲಿಸಬೇಕು ಎಂದು ತಿಳಿಸಿದರು.

ಬಡ ಜನರು ಖಾಸಗಿ ಆಸ್ಪತ್ರೆಗಳಿಗೆ ಪರದಾಡದ ರೀತಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಖಾಸಗಿ ಆಸ್ಪತ್ರೆಗಳು ಹೆಚ್ಚು ದುಡ್ಡು ವಸೂಲಿ ಮಾಡದಂತೆ ನೋಡಿಕೊಳ್ಳಬೇಕು, ಹೆಚ್ಚು ದುಡ್ಡು ವಸೂಲಿ ಮಾಡಿದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿದಿನ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಮತ್ತೆ ಕೋವಿಡ್ ಸೆಂಟರ್‌ಗಳನ್ನು ಆರಂಭ ಮಾಡುವ ಅವಶ್ಯಕತೆ ಇರುವುದರಿಂದ ಮುಂದಿನ ದಿನಗಳಲ್ಲಿ ಸಭೆಯನ್ನು ಕರೆದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕೋವಿಡ್‌ ಸೆಂಟರ್‌ಗಳ ಆರಂಭ ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಜಿಲ್ಲಾಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

***

ಕೋವಿಡ್ ಔಷಧ ಹೆಚ್ಚಿನ ದರಕ್ಕೆ ಮಾರಿದರೆ ಕ್ರಮ

ವಿಜಯಪುರ: ಕೋವಿಡ್-19 ಸೋಂಕಿಗಾಗಿ ನೀಡಲಾಗುತ್ತಿರುವ ಔಷಧ ಹಾಗೂ ಚುಚ್ಚುಮದ್ದುಗಳನ್ನು ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ಶ್ವೇತಾ ವೀರಣ್ಣ ನಾಗಠಾಣ ಎಚ್ಚರಿಕೆ ನೀಡಿದರು.

ಕೋವಿಡ್ ಆಸ್ಪತ್ರೆಯ ಸಂಬಂಧಿಸಿದ ಔಷಧ ಮಳಿಗೆಗಳಲ್ಲಿ ಔಷಧ ಅಥವಾ ಚುಚ್ಚುಮದ್ದುಗಳು ದಾಸ್ತಾನಿನ ಅವಶ್ಯಕತೆ ಇದ್ದರೆ ಈ ಕುರಿತು ಸಾಕಷ್ಟು ಮುಂಚಿತವಾಗಿ ಕಚೇರಿಗೆ ಲಿಖಿತವಾಗಿ ಮಾಹಿತಿ ನೀಡಲು ಅವರು ತಿಳಿಸಿದ್ದಾರೆ.

ಪ್ರತಿಯೊಂದು ಔಷಧ ಖರೀದಿ ಮತ್ತು ಮಾರಾಟ ವಿವರಗಳನ್ನು ಕಾಯ್ದಿರಿಸಬೇಕು. ರೆಮಿಡಿಸಿವಿರ್‌ ಔಷಧಕ್ಕೆ ಸಂಬಂಧಪಟ್ಟಂತೆ ಖರೀದಿ ಹಾಗೂ ಮಾರಾಟ ವಿವರಗಳ ಪ್ರತಿಯನ್ನು ಕೂಡಲೇ ಕಚೇರಿಗೆ ನೀಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.