ADVERTISEMENT

ಯೋಜನೆಗಳ ಪ್ರಚಾರ; ಕಲಾತಂಡಗಳ ಪಾತ್ರ ಮುಖ್ಯ

ಬೀದಿನಾಟಕ-ಜಾನಪದ ಕಲಾ ತಂಡಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:51 IST
Last Updated 23 ನವೆಂಬರ್ 2022, 13:51 IST
ವಿಜಯಪುರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ನಡೆದ  ಬೀದಿ ನಾಟಕ- ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಲಾವಿದರು ನಾಟಕ ಪ್ರದರ್ಶಿಸಿದರು
ವಿಜಯಪುರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ನಡೆದ  ಬೀದಿ ನಾಟಕ- ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಲಾವಿದರು ನಾಟಕ ಪ್ರದರ್ಶಿಸಿದರು   

ವಿಜಯಪುರ: ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ- ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಮನವರಿಕೆ ಮಾಡಿಕೊಡುವಲ್ಲಿ ಕಲಾತಂಡಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ADVERTISEMENT

ಕಲಾ ತಂಡಗಳು ಕಲೆಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಲುಪಿಸಲು ಸಂವಹನ ಮಾಧ್ಯಮವಾಗಿ ಬೀದಿನಾಟಕ ಮತ್ತು ಜಾನಪದ ಕಲಾತಂಡಗಳು, ತಮ್ಮ ವಿಶಿಷ್ಟವಾದ ಕಲೆ, ಶೈಲಿಯಿಂದ ಜನರಿಗೆ ಮನಮುಟ್ಟುವಂತೆ ಪ್ರದರ್ಶಿಸುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಹೆಚ್ಚಿನ ಜನರು ಪಡೆದುಕೊಳ್ಳುವಂತೆ ಪ್ರೇರೆಪಿಸಬೇಕು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಮಾತನಾಡಿ, ಆಯ್ಕೆಯಾದ ಕಲಾ ತಂಡಗಳು ಜಿಲ್ಲೆಯ ವಿವಿಧೆಡೆ ಸಂಚರಿಸಿ, ಬೀದಿ ನಾಟಕ ಹಾಗೂ ಜಾನಪದ ಸಂಗೀತದ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿವೆ ಎಂದು ಹೇಳಿದರು.

ಆಯ್ಕೆ ಪ್ರಕ್ರಿಯೆಯಲ್ಲಿ ವಿಶ್ವಚೇತನ ಕಲಾ ತಂಡ, ಗ್ರಾಮೀಣ ಅಭಿವೃದ್ದಿ ಸಂಸ್ಥೆ, ರಂಗಮೇಳ ಕಲಾ ಸಂಸ್ಥೆ ಬೀದಿ ನಾಟಕ ತಂಡಗಳು ಹಾಗೂ ಸರಸ್ವತಿ ಗಾಯನ ಸಂಘ ಶಿರಬೂರ, ಗುರುಪ್ರಸಾದ ಜಾನಪದ ಕಲಾ ತಂಡ ಸಿದ್ದಾಪುರ, ಜಾನಪದ ತಂಡಗಳು ಭಾಗವಹಿಸಿ ಸರ್ಕಾರದ ಯೋಜನೆಗಳ ಕುರಿತು ಪ್ರದರ್ಶನ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಡಾ.ಅರವಿಂದ ಲಂಬು, ಕ್ರೀಡಾ ಅಧಿಕಾರಿ ಎಸ್.ಜಿ.ಲೋಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಮಂಜುಳಾ ದುರಗನ್ನವರ, ಸಿನಿ ಚಾಲಕ ಸುರೇಶ ಅಂಬಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.