ವಿಜಯಪುರ: ನಗರದಲ್ಲಿ ಕಳೆದ ಏಳು ವರ್ಷಗಳಲ್ಲಿ ಗುಣಮಟ್ಟದ ರಸ್ತೆಗಳು, ಚರಂಡಿ ನಿರ್ಮಾಣ, ಕಸ ವಿಲೇವಾರಿ ಹೀಗೆ ಪ್ರತಿಯೊಂದರಲ್ಲಿಯೂ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ನಗರದ ಸೌಂದರ್ಯಕರಣದ ಜೊತೆಗೆ ಆಸ್ತಿಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಏಕತಾ ನಗರದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಹತ್ತಿರ ಭಾನುವಾರ ನಗರ ಮತಕ್ಷೇತ್ರದ ವ್ಯಾಪ್ತಿಯ ತೊರವಿ ಗ್ರಾಮ ಪಂಚಾಯಿತಿಯಲ್ಲಿ ಬರುವ ನವರಸಪುರದ ವಿವಿಧ ಕಾಲೊನಿಗಳಲ್ಲಿ ಆರ್.ಡಿ.ಪಿ.ಆರ್ ಇಲಾಖೆಯಿಂದ ಮಂಜೂರಾದ ₹10 ಕೋಟಿ ಅನುದಾನದಲ್ಲಿ ಆಂತರಿಕ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದಲ್ಲಿ ಅಮಾಯಕರ ಆಸ್ತಿಗಳನ್ನು ಕಬಳಿಸುವ ಲಪುಟರಿದ್ದಾರೆ. ತಮ್ಮ ಉತಾರಗಳನ್ನು ಆಗಾಗ ಪರಿಶೀಲಿಸಿ, ಆನ್‌ಲೈನ್‌ನಲ್ಲೂ ನೋಡಲು ಅವಕಾಶವಿದೆ. ಅಲ್ಲದೆ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಾಗೆಗಳನ್ನು ಸಹ ಪುಡಾರಿಗಳು ಕಬಳಿಸಲು ಯತ್ನಿಸುತ್ತಿದ್ದು, ತಮ್ಮ ಗಮನಕ್ಕೆ ಬಂದ ತಕ್ಷಣ ಶಾಸಕರ ಕಚೇರಿಗೆ ತಿಳಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯಪುರ ನಗರದಲ್ಲಿ ನಾವು ಆರಂಭಿಸಿದ ವಕ್ಫ್ ವಿರುದ್ಧ ಹೋರಾಟ ಇಡೀ ದೇಶಕ್ಕೆ ಮುನ್ನುಡಿ ಆಯಿತು. ಇದರಿಂದ ಅಮಾಯಕರ, ಮಠ ಮಾನ್ಯಗಳ ಮತ್ತು ಸರ್ಕಾರಿ ಆಸ್ತಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ನಗರದಲ್ಲಿ ಎಲ್ಲ ಬಡಾವಣೆ, ಕಾಲೊನಿಗಳಲ್ಲಿ ಹಂತ ಹಂತವಾಗಿ ರಸ್ತೆ, ಚರಂಡಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಪಸ್ವಲ್ಪ ಕಡೆ ಉಳಿದುಕೊಂಡಿದ್ದರೆ ಗಮನಕ್ಕೆ ತನ್ನಿ ಅಲ್ಲಿಯೂ ಮಾಡಿ ಮುಗಿಸಲಾಗುವುದು. ಅದೇ ರೀತಿ ಎಲ್ಲಿಯೂ ನೀರಿನ ಕೊರತೆ ಆಗದಂತೆ, ಎಲ್ಲಾ ಪ್ರದೇಶಗಳಿಗೂ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಕುಡಿಯುವ ನೀರಿನ ಯೋಜನೆ ಹಂತ-3ರ ಮಂಜೂರಾತಿಗಾಗಿ ಸರ್ಕಾರಕ್ಕೆ ₹ 750 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ, ಕಟ್ಟ ಕಡೆಯ ಮನೆಗಳಿಗೂ ಸಮರ್ಪಕವಾಗಿ ನೀರು ಬರಲಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಗಚ್ಚಿನಮನಿ, ಮುಖಂಡರಾದ ಎಸ್.ಎಲ್.ಇಂಗಳೇಶ್ವರ ದಾದಾಸಾಹೇಬ ಬಾಗಾಯತ, ಅನೀಲ ಪತ್ತೇಪೂರ, ವಿಠ್ಠಲ ಜರತಾಪ, ಬಿ.ಡಿ.ಕಡಕೋಳ, ಸುನೀಲ ಚವ್ಹಾಣ, ಶ್ರೀರಾಮ ದೇಶಪಾಂಡೆ, ಸಂತೋಷ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.