ಸಿಂದಗಿ: ‘ಜುಲೈ ತಿಂಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಅಧಿವೇಶನ ನಡೆಯಲಿದ್ದು, ಸಿಂದಗಿ ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲಿ ಸಿ.ಸಿ. ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಾಗಿ ₹50 ಕೋಟಿಯ ವಿಶೇಷ ಅನುದಾನಕ್ಕೆ ಪ್ರಸ್ತಾವವನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ’ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.
ಪಟ್ಟಣದ ಸ್ವಾಮಿವಿವೇಕಾನಂದ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ಉಪವಿಭಾಗ ಸೋಮವಾರ ಹಮ್ಮಿಕೊಂಡಿದ್ದ ₹2.25 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಪಟ್ಟಣದಲ್ಲಿ 24/7 ಕುಡಿಯುವ ನೀರು ಪೂರೈಕೆ ಕಾಮಗಾರಿಗಾಗಿ ₹36 ಕೋಟಿ ಮಂಜೂರಾಗಿದ್ದು, ಈಗಾಗಲೇ 8.50 ಕಿ.ಮೀ. ಕಾಮಗಾರಿ ಪ್ರಾರಂಭಗೊಂಡಿದೆ. ₹27 ಕೋಟಿ ವೆಚ್ಚದ ಮೆಗಾ ಮಾರ್ಕೆಟ್ ನಿರ್ಮಾಣಕ್ಕಾಗಿ ₹5 ಕೋಟಿ ಅನುದಾನ ಬಿಡುಗಡೆಗೊಂಡು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ₹9.75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಜಾಸೌಧ ಕಟ್ಟಡಕ್ಕೆ ಅಗತ್ಯವಾದ ಹೆಚ್ಚುವರಿ ₹5 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸಲು ₹39.90 ಕೋಟಿ ಮೊತ್ತಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತು, ಕಾಮಗಾರಿ ಪ್ರಾರಂಭಿಸಲು ಮೇ 31ರಂದು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ’ ಎಂದು ಶಾಸಕ ಮನಗೂಳಿ ವಿವರಿಸಿದರು.
‘ಮುಂಬರುವ ದಿನಗಳಲ್ಲಿ ಸ್ವಾಮಿ ವಿವೇಕಾನಂದ ವೃತ್ತದಿಂದ ತೋಂಟದ ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಟಿಪ್ಪುಸುಲ್ತಾನ್ ವೃತ್ತದವರೆಗೆ ಸುಸಜ್ಜಿತ ರಸ್ತೆ ಮತ್ತು ಪುರಸಭೆ ಕಾರ್ಯಾಲಯದ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದರು.
2 ವರ್ಷಗಳ ಅವಧಿಯಲ್ಲಿ ಮತಕ್ಷೇತ್ರದ 106 ಹಳ್ಳಿಗಳು, 16 ತಾಂಡಾಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವೆ ಎಂದು ತಿಳಿಸಿದರು.
ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ, ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಹಾಗೂ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪ್ರಾಧ್ಯಾಪಕ ರವಿ ಗೋಲಾ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಲೋಕೋಪಯೋಗಿ ಇಲಾಖೆ ಎಇಇ ಅರುಣ, ಗುತ್ತಿಗೆದಾರರಾದ ಮುತ್ತು ಮುಂಡೇವಾಡಗಿ, ಶ್ರೀಕಾಂತ ಹೂಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.