
ವಿಜಯಪುರ: ಚಡಚಣ ತಾಲ್ಲೂಕಿನ ಮರಗೂರ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಗುರುವಾರ ಮನವಿ ಸಲ್ಲಿಸಿದರು.
ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಚಡಚಣ ತಾಲ್ಲೂಕಿನ ಮರಗೂರ ಮೊರಾರ್ಜಿ ದೇಸಾಯಿ ವಸತಿ ನಿಲಯ ಆವರಣವು ಧೂಮಪಾನ, ಮಧ್ಯಪಾನ, ತಂಬಾಕು ಸೇರಿದಂತೆ ಮಾದಕ ವಸ್ತುಗಳ ತಾಣವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳು ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಸೇವನೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ವಸತಿ ನಿಲಯ ಅವವ್ಯಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳು, ಶಿಕ್ಷಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಕಲಘಟಗಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಸಾಮಾಜಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ವಸತಿ ನಿಲಯದ ವಾರ್ಡನ್ ಅವರ ಬೇಜವಾಬ್ದಾರಿಯಿಂದ ಜಿಲ್ಲೆಯ ಬಡ ಮಕ್ಕಳ ಹಾಳಾಗುತ್ತಿರುವುದು ನೋವಿನ ಸಂಗತಿ. ಕೂಡಲೇ ವಾರ್ಡನ್ ಸೇರಿದಂತೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರವೇ ಮುಖಂಡ ಜಗದೇವ ಸೂರ್ಯವಂಶಿ ಮಾತನಾಡಿದರು. ರೈತ ಭಾರತ ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ವಿನೋದ ಖೇಡ, ಎಂ.ಆರ್. ಸೌದಾಗರ, ಸಿದ್ರಾಮಪ್ಪ ಹೊನಮೊರೆ, ಲಾಯಪ್ಪ ಇಂಗಳೆ, ಜ್ಯೋತಿ ಮಿಣಜಗಿ, ಶಿವರಾಜ ಸೂರ್ಯವಂಶಿ, ಆನಂದ ಮಿಣಜಗಿ, ಅಶೋಕ ವಾಲಿಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.