ಇಂಡಿ: ತಾಲ್ಲೂಕಿನ ರೈತರು ಓರಿಯಂಟಲ್ ಇನ್ಸ್‌ರನ್ಸ್ ಕಂಪನಿಗೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ₹ 960 ರಂತೆ ₹ 11,700 ರೈತರು 1.45 ಕೋಟಿ ಸಂದಾಯ ಮಾಡಿದ್ದಾರೆ. ಆದರೆ ರೈತರಿಗೆ ತೊಗರಿ ಬೆಳೆ ಕುರಿತು ವಿಮಾ ಕಂಪನಿಯಿಂದ ಒಂದು ಪೈಸೆ ಕೂಡ ಬಂದಿಲ್ಲ ಎಂದು ಪ್ರಗತಿಪರ ರೈತ ಮಲ್ಲಪ್ಪ ಗುಡ್ಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇ ವತಿಯಿಂದ ತೊಗರಿ ಬೆಳೆಗೆ ಪರಿಹಾರ ಆಗ್ರಹಿಸಿ, ನಡೆದ ಅಹೋರಾತ್ರಿ ಧರಣಿ ಸತ್ಯಾಗ್ರಹದ 2ನೆಯ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲ ರೈತರಿಗೆ ಸತತವಾಗಿ ಮೂರು ವರ್ಷದಿಂದ ಖಾಸಗಿ ವಿಮಾ ಕಂಪನಿ ಬೆಳೆ ಪರಿಹಾರ ನೀಡದೇ ಇರುವುದಕ್ಕೆ ಅಕ್ರೋಶಗೊಂಡ ರೈತರು ಕಂಪನಿ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಖಾಸಗಿ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಈ ಕುರಿತು ವಿಚಾರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಏ.9 ರಂದು ತಾಂಬಾ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆ, 10 ರಂದು ನಾದ ಕೆಡಿ ಗ್ರಾಮದಲ್ಲಿ ರಸ್ತೆ ತಡೆ ಮತ್ತು 11 ರಂದು ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಲಿದೆ. ಕರವೇ ಕಾರ್ಯಕರ್ತರು ಮತ್ತು ಪ್ರಗತಿಪರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಂಡರು.
ಅಹಿರಸಂಗದ ರೇವಣಸಿದ್ದಯ್ಯ ಶ್ರೀಗಳು ತಾಲ್ಲೂಕಿನ ಸಮಸ್ಥ ಮಠಾಧೀಶರ ಪರವಾಗಿ ಭಾಗವಹಿಸಿ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಕಾಸುಗೌಡ ಬಿರಾದಾರ, ಅನಿಲ್ ಜಮಾದಾರ, ಹಣಮಂತರಾಯಗೌಡ ಪಾಟೀಲ, ಬತ್ತು ಸಾವಕಾರ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಧರ್ಮರಾಜ ಸಾಲೋಟಗಿ, ಮಂಜು ದೇವರ, ಶ್ರೀಕಾಂತ ಬಡಿಗೇರ, ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ರಾಮಸಿಂಗ್ ಕನ್ನೊಳ್ಳಿ, ರವಿ ಕ್ಷತ್ರಿ, ಅಶೋಕ ಅಕಲಾದಿ, ಈರಣ್ಣ ಕಪ್ಪೆನವರ, ಅರವಿಂದ ಪಾಟೀಲ, ಶಿವಾನಂದ ಗಚ್ಚಿನಮಠ, ಸಂತೋಷ ಬಗದುರಗಿ, ಮಲ್ಲು ಚಾಕುಂಡಿ, ಶ್ರೀಶೈಲ ಗುನ್ನಾಪುರ, ಶಿವಾನಂದ ಚಾಳಿಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.