ADVERTISEMENT

ಆಲಮಟ್ಟಿ ಶಾಸ್ತ್ರಿ ಸಾಗರದ ಎತ್ತರ ಹೆಚ್ಚಿಸಲು ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:21 IST
Last Updated 30 ಜೂನ್ 2025, 16:21 IST
ನಿಡಗುಂದಿ ಪಟ್ಟಣದಲ್ಲಿ ರೈತರು, ಸ್ವಾಮೀಜಿಗಳು, ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದರು
ನಿಡಗುಂದಿ ಪಟ್ಟಣದಲ್ಲಿ ರೈತರು, ಸ್ವಾಮೀಜಿಗಳು, ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದರು   

ನಿಡಗುಂದಿ : ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ಹೆಚ್ಚಿಸುವುದು ಹಾಗೂ ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಹೋರಾಟ ಸಮಿತಿ ನೇತೃತ್ವದಲ್ಲಿ ನಿಡಗುಂದಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಸ್ವಾಮೀಜಿಗಳು, ರೈತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

ಪ್ರತಿಭಟನಾ ಸಮಾವೇಶಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ನಿಡಗುಂದಿ ರುದ್ರೇಶ್ವರ ಮಠದ ರುದ್ರಮುನಿ ಸ್ವಾಮೀಜಿ, ಚಿಮ್ಮಲಗಿ ಸಿದ್ಧರೇಣುಕ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಹುಣಶ್ಯಾಳದ ಸಂಗನಬಸವ ಸ್ವಾಮೀಜಿ, ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮತ್ತಿತರರು ಚಾಲನೆ ನೀಡಿದರು.

ADVERTISEMENT

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ. ರೈತರ ಹಿತ ಕಾಪಾಡಲು ನ್ಯಾಯಾಧೀಕರಣದ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮಹಾರಾಷ್ಟ್ರ ಸರ್ಕಾರ ಉತ್ತರ ಕರ್ನಾಟಕದ ರೈತರನ್ನು ಬಲಿ ತೆಗೆದುಕೊಳ್ಳಲು ಹೊರಟಿದೆ. ಆಲಮಟ್ಟಿ ಜಲಾಶಯದ ಎತ್ತರದಿಂದ ಮಹಾರಾಷ್ಟ್ರದ ಹಳ್ಳಿಗಳಿಗೆ ಯಾವುದೇ ತೊಂದರೆ ಆಗದಿದ್ದರೂ ವಿನಾಕಾರಣ ಕ್ಯಾತೆ ತೆಗೆದಿದೆ ಎಂದು ಆರೋಪಿಸಿದರು.

2010ರಲ್ಲಿ ನ್ಯಾ.ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣವು ತೀರ್ಪು ನೀಡಿದ್ದು 2013ರಲ್ಲಿ ಅಂತಿಮ ತೀರ್ಪು ನೀಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀ.ಗೆ ಹೆಚ್ಚಿಸಲು, ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಆ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎ.ಡಿ.ಅಮರವಾದಗಿ ಹೋರಾಟಗಾರರಿಂದ ಮನವಿ ಪತ್ರ ಸ್ವೀಕರಿಸಿದರು.

ಹೋರಾಟ ಸಮಿತಿಯ ಮುಖಂಡರಾದ ವಿಜಯ ಪೂಜೇರಿ, ಸೀತಪ್ಪ ಗಣಿ, ಉಮೇಶ ವಾಲೀಕಾರ, ಬಸವರಾಜ ಬಾಗೇವಾಡಿ, ವೆಂಕಟೇಶ ಬಂಡಿವಡ್ಡರ, ಬಾಲಪ್ಪಗೌಡ ಲಿಂಗದಳ್ಳಿ, ನಿಂಗರಾಜ ಆಲೂರ, ಸಿದ್ರಾಮ ರಂಜಣಗಿ,ಶಾರದಾ ಕಾಳಣ್ಣವರ, ಸುಜಾತಾ ಬಂಡಿವಡ್ಡರ ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಂದು ಘೋಷಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆಲಮಟ್ಟಿ ಲಾಲ್‌ಬಹಾದ್ದೂರ ಶಾಸ್ತ್ರಿ ಜಲಾಶಯದ ಎತ್ತರವನ್ನು 524.256 ಮೀ.ಗೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಗೆ ತಗಲುವ ಅನುದಾನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಿಡುಗಡೆ ಮಾಡಬೇಕು. ಆಲಮಟ್ಟಿ ಹಿನ್ನೀರಿನಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ಮುಧೋಳ ಬೀಳಗಿ ತಾಲ್ಲೂಕಿನ ಜಮೀನುಗಳು ಹಿನ್ನೀರಿನಿಂದ ಮುಳುಗಡೆಯಾಗಿದ್ದು ಇನ್ನು ಪರಿಹಾರ ಬಂದಿಲ್ಲ. ಅವರಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.