ಕೊಲ್ಹಾರ: ಅಂಧ, ಅನಾಥ, ವಿಕಲಚೇತನ ಬಡವರ ಪಾಲಿಗೆ ಸ್ವಾಭಿಮಾನದ ಗಂಧರ್ವ ವಿದ್ಯೆಯನ್ನು ಧಾರೆ ಎರೆದು ಸಮಾಜದಲ್ಲಿ ತಲೆ ಎತ್ತಿ ಬದುಕನ್ನು ಸಾಗಿಸುವ ಪ್ರೇರಣೆ ನೀಡಿದವರೇ ಗದುಗಿನ ವೀರೆಶ್ವರ ಪುಣ್ಯಾಶ್ರಮದ ಸಂಸ್ಥಾಪಕರಾದ ಪಂಚಾಕ್ಷರಿ ಗವಾಗಿಗಳಾಗಿದ್ದಾರೆ ಎಂದು ಹಿಂದಿನ ಗ್ರಾಮ ಪಂಚಾಯಿತಿ ಹಾಗೂ ಪಿಕೆಪಿಎಸ್ ಉಪಾದ್ಯಕ್ಷ ಈರಯ್ಯ ಹ. ಮಠಪತಿ ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಕಂಬಿ ಮಂಟಪದಲ್ಲಿ ಕೊಲ್ಹಾರ ತಾಲ್ಲೂಕು ಜಾನಪದ ಪರಿಷತ್ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ಪಂಡಿತ್ ಪಂಚಾಕ್ಷರಿ ಗವಾಯಿಗಳ 81ನೇ ಮತ್ತು ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದರು.
ಮನುಷ್ಯ ಸ್ವಾವಲಂಬಿ ಜೀವನ ಸಾಗಿಸಲು ಮುಂದೆ ಬರಬೇಕಾದರೆ ಗುರು ಹಿರಿಯರ ಆಶಿರ್ವಾದ ಸದಾಕಾಲ ಇದ್ದಾಗ ಮಾತ್ರ ಸಾಧ್ಯ. ಇಂತಹ ಮುಂದಾಲೋಚಣೆಯ ಪ್ರತಿಫಲವಾಗಿಯೇ ವೀರೇಶ್ವರ ಪುಣ್ಯಾಶ್ರಮವು ನಾಡಿಗೆ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪನ್ನು ಕಲಾದೇವಿಯ ಆರಾಧಕರಾಗಿ ಸಂಗೀತ ಸರಸ್ವತಿಯ ಪುತ್ರರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಮಕ್ಕಳ ತಂದೇ ತಾಯಿಗಳೇ ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು ಎಂದರು.
ಜನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಗಣಿ ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಭಾರತ ಮಾತೆಯ ಮಡಿಲಿನಲ್ಲಿ ಪಂಚಾಕ್ಷರಿ ಮತ್ತು ಪುಟ್ಟರಾಜ ಎಂಬ ಎರಡು ಅನರ್ಥ್ಯ ರತ್ನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹವ್ಯಾಸಿ ರಂಗಭೂಮಿ ಎಲ್ಲ ತರಹದ ಸಂಗೀತ ಕಲಾವಿದರ ಆಶ್ರಯದಾತರಾಗಿ ಅಂಧರ ಬಾಳಿಗೆ ಬೆಳಕಾಗಿ ವಿಶ್ವ ಮಟ್ಟದಲ್ಲಿ ಗುರುತಿಸುವಂತಹ ಕಲೆಯ ಪೂಜಕರನ್ನು ಸಂಗೀತ ಮಾತೆಯ ಆರಾಧಕರನ್ನು ಗಾಯನ ಲೋಕದ ಗಾನ ಪ್ರತಿಭೆಗಳನ್ನು ಹುಟ್ಟು ಹಾಕಿರುವ ಅಂತಹ ನಡೆದಾಡುವ ದೇವರುಗಳ ಪುಣ್ಯಸ್ಮರಣೋತ್ಸವ ಆಚರಣೆ ಮಾಡುವದು ಯುವಕರಿಗೆ ಇತಿಹಾಸ ತಿಳಿಸದಂತಾಗುತ್ತದೆ ಎಂದರು.
ಬಳೂತಿ ಗ್ರಾಮದ ಶಂಕ್ರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೀಮಪ್ಪ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶ್ರೀಕಾಂತ ಹಂಗರಗಿ, ಡೋಂಗ್ರಿ ಕಂಕರಪೀರ, ಮಲ್ಲಪ್ಪ ತುಂಬರಮಟ್ಟಿ, ಬಸಪ್ಪ ಗೂಗ್ಯಾಳ, ಮಲ್ಲಯ್ಯ ಗಣಕುಮಾರ, ನಾಮದೇವ ಪವಾರ, ರಾಚಪ್ಪ ಗಣಿ, ಶ್ರೀಶೈಲ ಬಾಟಿ ಅನೇಕರು ಆಗಮಿಸಿದ್ದರು. ಪಟ್ಟಣದ ಹಾಗೂ ಬಳೂತಿ ಗ್ರಾಮದ ಸಂಗೀತ ಬಳಗದ ಸರ್ವ ಕಲಾಪ್ರೇಮಿಗಳು ಇದ್ದರು.
ಪತ್ರಕರ್ತ ಪರಶುರಾಮ ಗಣಿ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.