ADVERTISEMENT

ದಿನವಿಡೀ ಮಳೆ: ಭೀಮಾ ತೀರದಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 14:22 IST
Last Updated 26 ಸೆಪ್ಟೆಂಬರ್ 2025, 14:22 IST
   

ವಿಜಯಪುರ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಆರಂಭವಾದ ಮಳೆಯು ಶುಕ್ರವಾರ ದಿನವಿಡೀ ಬಿಡುವು ನೀಡದೇ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು. ವಿಜಯಪುರ ಜಿಲ್ಲೆಯಲ್ಲಿ ಶನಿವಾರವೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್‌’ ಮುನ್ನೆಚ್ಚರಿಕೆ ನೀಡಿದೆ.

ಹೆದ್ದಾರಿ ಸಂಚಾರ ಆರಂಭ: ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸೀನಾ ನದಿ ಪ್ರವಾಹದ ನೀರು ಕಡಿಮೆಯಾಗಿದ್ದರಿಂದ ಮೂರು ದಿನಗಳಿಂದ ಬಂದ್ ಮಾಡಲಾಗಿದ್ದ ವಾಹನಗಳ ಸಂಚಾರ ಶುಕ್ರವಾರ ಸಂಜೆ ಆರಂಭವಾಗಿದೆ.

ಭೀಮಾ ನದಿ ತೀರದಲ್ಲಿ ಪ್ರವಾಹ ಹೆಚ್ಚುತ್ತಿದ್ದು, ಎರಡು ದಿನಗಳಿಂದ ಆಲಮೇಲ ತಾಲ್ಲೂಕಿನ ತಾರಾಪುರ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಪ್ರವಾಹದಲ್ಲಿ ಸಿಲುಕಿದ 50ಕ್ಕೂ ಹೆಚ್ಚು ಜನರನ್ನು ಸಮೀಪದ ಪುನರ್ ವಸತಿ ಕೇಂದ್ರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.  

ADVERTISEMENT

ನದಿ ತೀರದ ಗ್ರಾಮಗಳಾದ ದೇವಣಗಾಂವ, ತಾವರಖೇಡ, ಬ್ಯಾಡಗಿಹಾಳ, ಕುಮಸಗಿ, ಶೇಂಬೆವಾಡ, ಕಡ್ಲೆವಾಡ, ಶಿರಸಗಿ ಗ್ರಾಮಗಳ ಕೆಲ ಮನೆಗಳಿಗೆ ನೀರು ಸುತ್ತುವರೆದು ಜಲಾವೃತಗೊಂಡಿದೆ. 

ಆಲಮೇಲ ತಾಲ್ಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ನಿಂದ ಗುರುವಾರ 28 ಗೇಟ್ ತೆರೆದು, 3.55 ಲಕ್ಷ ಕ್ಯೂಸೆಕ್‌ ಹೊರ ಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.