ADVERTISEMENT

‘ಮಳೆ ನೀರು’ ನಿಲ್ದಾಣ!: ವಿಜಯಪುರ ನಗರ ರೈಲು ನಿಲ್ದಾಣದಲ್ಲಿ ವಿನೂತ ಪ್ರಯೋಗ

ಬಸವರಾಜ ಸಂಪಳ್ಳಿ
Published 31 ಜುಲೈ 2021, 16:18 IST
Last Updated 31 ಜುಲೈ 2021, 16:18 IST
ವಿಜಯಪುರ ನಗರ ರೈಲು ನಿಲ್ದಾಣದ ನೋಟ -ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರ ರೈಲು ನಿಲ್ದಾಣದ ನೋಟ -ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ‘ಗುಮ್ಮಟನಗರಿ‘ಯ ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ಇದು ಕೇವಲ ರೈಲು ನಿಲ್ದಾಣವಲ್ಲ; ಮಳೆ ನೀರು ನಿಲ್ದಾಣವಾಗಿ(ರೈನ್‌ ನಿಲ್ದಾಣ) ಗುರುತಿಸಿಕೊಂಡಿದೆ.

ಹೌದು, ನಗರದ ರೈಲು ನಿಲ್ದಾಣದ ಚಾವಣಿ ಮೇಲೆ ಹಾಗೂ ಆವರಣದಲ್ಲಿ ಬೀಳುವ ಒಂದು ಹನಿ ಮಳೆ ನೀರೂ ವ್ಯರ್ಥವಾಗದಂತೆ ವೈಜ್ಞಾನಿಕವಾಗಿ ಕಾಪಿಡುವ, ಬಳಸುವ ಮೂಲಕ ಸ್ವಾಲಂಬನೆ ಜೊತೆಗೆ ಹಣದ ಉಳಿತಾಯವೂ ಸಾಧ್ಯವಾಗಿದೆ.

6937 ಚದರ ಮೀಟರ್ ಸುತ್ತಳತೆಯ ವಿಜಯಪುರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿರುವುದರಿಂದ ವಾರ್ಷಿಕ29,135,40 ಲೀಟರ್ ನೀರು ಸಂಗ್ರಹವಾಗುತ್ತಿದೆ. ಈ ಮಳೆ ನೀರನ್ನು ರೈಲು ನಿಲ್ದಾಣದ ಸ್ವಚ್ಛತೆಗೆ ಹಾಗೂ ಉದ್ಯಾನ, ಗಿಡಮರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಿಲ್ದಾಣದ ಆಸುಪಾಸು ಅಂತರ್ಜಲ ಮಟ್ಟವೂ ಏರಿಕೆಯಾಗಿದೆ ಎನ್ನುತ್ತಾರೆ ಹುಬ್ಬಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಅನೀಶ್ ಹೆಗ್ಡೆ.

ADVERTISEMENT

ಅಷ್ಟೇ ಅಲ್ಲದೇ, ನೈರುತ್ಯ ರೈಲ್ವೆ ಇಲಾಖೆಯು ವಿಜಯಪುರ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಪಾವತಿಸುತ್ತಿರುವ ನೀರಿನ ಶುಲ್ಕದಲ್ಲಿ ₹87,406 ಉಳಿತಾಯವಾಗಿದೆ ಎನ್ನುತ್ತಾರೆ ಅನೀಶ್‌ ಹೆಗ್ಡೆ.

ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಮಳೆಯಾದಾಗ ಹರಿದುಬರುವ ನೀರಿನ ಸಂಗ್ರಹಕ್ಕಾಗಿ (6 ಮೀಟರ್ X 3.25 ಮೀಟರ್‌ X1.70 ಮೀ) ಗುಂಡಿಯೊಂದನ್ನು ನಿರ್ಮಿಸಲಾಗಿದೆ. ಈ ಗುಂಡಿಗೆ ಮಳೆ ನೀರಿನೊಂದಿಗೆ ತೇಲಿಕೊಂಡು ಬರುವ ತ್ಯಾಜ್ಯ, ಮಣ್ಣು ಗುಂಡಿಯೊಳಗೆ ಹೋಗದಂತೆ ತಡೆಯಲು ಅಲ್ಲಲ್ಲಿ ಜಾಲರಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 150 ಮೀಟರ್‌ ಆಳದ ಕೊಳವೆಬಾವಿಯಲ್ಲಿ ಮಳೆ ನೀರು ಇಂಗಲು ವ್ಯವಸ್ಥೆ ಮಾಡಲಾಗಿದೆ.‌‌

ಕಸ, ಕಡ್ಡಿ, ಮಣ್ಣು ಈ ಕೊಳವೆಬಾವಿಯೊಳಗೆ ಹೋಗದಂತೆಯೂ ಜಾಲರಿ ಅಳವಡಿಸಲಾಗಿದೆ. ಈ ಕೊಳವೆಬಾವಿ ಮತ್ತು ಗುಂಡಿಯ ಬಳಿ ಜಾನುವಾರು ಸೇರಿದಂತೆ ಜನರೂ ಬರದಂತೆ ತಪ್ಪಿಸಲು ಸುತ್ತಲೂ ತಂತಿಬೇಲಿ ಅಳವಡಿಸಲಾಗಿದೆ.

ಬರದ ನಾಡಿನರೈಲು ನಿಲ್ದಾಣ ಇದೀಗ ನೀರು ನಿಲ್ದಾಣದ ಖ್ಯಾತಿ ಗಳಿಸಿದೆ.

****

ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿರುವುದರಿಂದ ನಿಲ್ದಾಣದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಜೊತೆಗೆ ರೈಲ್ವೆಗೆ ಹಣದ ಉಳಿತಾಯವೂ ಆಗಿದೆ

–ಅನೀಶ್ ಹೆಗ್ಡೆ,ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ

ನೈರುತ್ಯ ರೈಲ್ವೆ,ಹುಬ್ಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.