ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಅಬ್ಬರಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:02 IST
Last Updated 19 ಮೇ 2022, 13:02 IST
ವಿಜಯಪುರ ನಗರದಲ್ಲಿ ಗುರುವಾರ ಸುರಿದ ಭಾರೀ ಮಳೆಯ ಪರಿಣಾಮ ನಗರದ ಕೆ.ಸಿ.ಮಾರುಕಟ್ಟೆ ರಸ್ತೆ ಮೇಲೆ ಹೊಳೆಯಂತೆ ಹರಿಯುತ್ತಿರುವ ನೀರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದಲ್ಲಿ ಗುರುವಾರ ಸುರಿದ ಭಾರೀ ಮಳೆಯ ಪರಿಣಾಮ ನಗರದ ಕೆ.ಸಿ.ಮಾರುಕಟ್ಟೆ ರಸ್ತೆ ಮೇಲೆ ಹೊಳೆಯಂತೆ ಹರಿಯುತ್ತಿರುವ ನೀರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ.

ಬುಧವಾರ ತಡರಾತ್ರಿಯಿಂದಲೇ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆಯು ಗುರುವಾರ ದಿನಪೂರ್ತಿ ಬಿಟ್ಟು ಬಿಟ್ಟು ಸುರಿಯಿತು. ಮಧ್ಯಾಹ್ನದ ಬಳಿಕ ದಟೈಸಿದ ಮೋಡಗಳು ನಿರಂತರವಾಗಿ ಮಳೆ ಸುರಿಸಿದ ಪರಿಣಾಮ ರಸ್ತೆ, ಚರಂಡಿ, ಹೊಲ, ಹಳ್ಳ, ಒಡ್ಡುವಾರಿಗಳಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡುಬಂದಿತು.

ವಿಜಯಪುರ ನಗರದ ರಸ್ತೆಗಳ ಮೇಲೆ ಮಳೆ ನೀರು ಹರಿಯಿತು. ಮಳೆಯಾಗುವ ಸಂದರ್ಭದಲ್ಲಿ ಜನ, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಶಾಲೆ, ಸರ್ಕಾರಿ, ಖಾಸಗಿ ಕಚೇರಿಗಳಿಗೆ, ಬ್ಯಾಂಕು, ಅಂಗಡಿ, ಮಳಿಗೆಗಳಿಗೆ ತೆರಳಿದವರು ಮನೆಗೆ ಮರಳಲು ಪರದಾಡಿದರು. ವಿದ್ಯುತ್‌ ಕೈಕೊಟ್ಟ ಕಾರಣ ಜನರು ಕತ್ತಲೆಯಲ್ಲಿ ಕಾಲ ಕಳೆದರು.

ADVERTISEMENT

ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ, ಕೊಲ್ಹಾರ, ಹೊರ್ತಿ, ಇಂಡಿ, ಆಲಮೇಲ, ಕಲಕೇರಿ, ಬಬಲೇಶ್ವರ, ತಿಕೋಟಾ, ನಾಲತವಾಡ, ನಿಡಗುಂದಿ, ಆಲಮಟ್ಟಿ, ಮನಗೂಳಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ.

ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಹಿನ್ನೆಡೆಯಾಗಿದೆ.

ವಿವಿಧೆಡೆ ಮಳೆ: ಗುರುವಾರ ಬೆಳಿಗ್ಗೆ 8 ಗಂಟೆಯ ವರೆಗೆ ಜಿಲ್ಲೆಯ ವಿವಿಧೆಡೆ ಆಗಿರುವ ಮಳೆಯ ಪ್ರಮಾಣ ಇಂತಿದೆ. ಬಸವನ ಬಾಗೇವಾಡಿ 8.2 ಮಿ.ಮೀ. ಮಳೆಯಾಗಿದೆ. ಉಳಿದಂತೆಮನಗೂಳಿ 1.1, ಆಲಮಟ್ಟಿ 16.4,
ಹೂವಿನ ಹಿಪ್ಪರಗಿ 12.2, ಅರೇಶಂಕರ 17.6, ಮಟ್ಟಿಹಾಳ 18.2,ವಿಜಯಪುರ 2.2,ಹಿಟ್ನಳ್ಳಿ 1.8,ಮಮದಾಪೂರ 3,
ಕನ್ನೂರ 43.2,ನಾದ ಬಿ ಕೆ 1.4,ಮುದ್ದೆಬಿಹಾಳ 35, ನಾಲತವಾಡ 32.7, ತಾಳಿಕೋಟಿ 14.3, ಢವಳಗಿ 20.6, ಸಿಂದಗಿ 2.4,ದೇವರಹಿಪ್ಪರಗಿ 1.5, ಕೊಂಡಗೂಳಿ 1 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.