ADVERTISEMENT

ಸಿಂದಗಿ|ಅಂಗಡಿಗೆ ನುಗ್ಗಿದ ಮಳೆ ನೀರು: ₹9 ಲಕ್ಷ ಮೊತ್ತದ ಔಷಧ ಹಾನಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:14 IST
Last Updated 12 ಮೇ 2025, 14:14 IST
ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ವಾಣಿಜ್ಯ ಮಳಿಗೆಯ ನೆಲಮಹಡಿಯಲ್ಲಿನ ಭಾಗ್ಯವಂತಿ ಮೆಡಿಕಲ್ ಸ್ಟೋರ್ಸ್‌ಗೆ ಮಳೆ ನೀರು ನುಗ್ಗಿ, ಹಾನಿಯಾಗಿದ್ದನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸೋಮವಾರ ಪರಿಶೀಲಿಸಿದರು
ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ವಾಣಿಜ್ಯ ಮಳಿಗೆಯ ನೆಲಮಹಡಿಯಲ್ಲಿನ ಭಾಗ್ಯವಂತಿ ಮೆಡಿಕಲ್ ಸ್ಟೋರ್ಸ್‌ಗೆ ಮಳೆ ನೀರು ನುಗ್ಗಿ, ಹಾನಿಯಾಗಿದ್ದನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸೋಮವಾರ ಪರಿಶೀಲಿಸಿದರು   

ಸಿಂದಗಿ: ವಾಣಿಜ್ಯ ಮಳಿಗೆ ನೆಲಮಹಡಿಯಲ್ಲಿ ಮಳೆ ನೀರು ಹೊಕ್ಕು ಅಂದಾಜು ₹9 ಲಕ್ಷ ಮೊತ್ತದ ಔಷಧ ಸಾಮಗ್ರಿಗಳು ಹಾನಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಶರಣು ಕುಂಬಾರ ಎಂಬುವವರಿಗೆ ಸೇರಿದ ಭಾಗ್ಯವಂತಿ ಮೆಡಿಕಲ್ ಸ್ಟೋರ್ಸ್ ನೆಲಮಹಡಿ ಅಂಗಡಿ ಪೂರ್ತಿ ನೀರಿನಿಂದ ತುಂಬಿಕೊಂಡಿದೆ. ಸೋಮವಾರ ಬೆಳಿಗ್ಗೆ ಆಯಿಲ್ ಎಂಜಿನ್ ಮೋಟಾರ್‌ನಿಂದ ನೀರು ಹೊರಹಾಕುವ ಕೆಲಸ ಬಹು ಹೊತ್ತು ಮುಂದುವರಿದಿತ್ತು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅವರ ಜೊತೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸದಸ್ಯ ಹಾಸಿಂ ಆಳಂದ ಹಾಗೂ ಮುಖ್ಯಾಧಿಕಾರಿ ರಾಜಶೇಖರ ಎಸ್., ಆರೋಗ್ಯ ನಿರೀಕ್ಷಕ ನಬಿರಸೂಲ ಉಸ್ತಾದ ಇದ್ದರು.

ADVERTISEMENT

ಕಳೆದ ಆರು ತಿಂಗಳಿಂದ ಮುಖ್ಯರಸ್ತೆ ಬದಿಯಲ್ಲಿರುವ ಚರಂಡಿ ಸ್ವಚ್ಛಗೊಳಿಸಿರಲಿಲ್ಲ. ಅಲ್ಲದೇ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಬಿದ್ದ ಮಣ್ಣಿನಿಂದ ಚರಂಡಿ ತುಂಬಿಕೊಂಡಿದೆ. ಹೀಗಾಗಿ ಬಸವೇಶ್ವರ ವೃತ್ತದಿಂದ ಬರುವ ನೀರು ಚರಂಡಿಯಲ್ಲಿ ಹೋಗದೇ ರಸ್ತೆಯಿಂದ ಹರಿದು ಬಂದು ಅಂಗಡಿಯಲ್ಲಿ ತುಂಬಿಕೊಂಡಿದೆ ಎಂದು ಅಲ್ಲಿನ ನಿವಾಸಿ ಶಿವಶರಣ ಸಿಂದಗಿ ತಿಳಿಸಿದರು.

‘ಚರಂಡಿ ಹಳೆಯದಾಗಿದೆ. ಕಟ್ಟಡಗಳ ನಿರ್ಮಾಣವಾದ ಕಾರಣ ಬಸವೇಶ್ವರ ವೃತ್ತದಿಂದ ಬರುವ ಚರಂಡಿ ನೀರು ರಸ್ತೆ ಮೇಲೆ ಹರಿದು, ನೆಲಮಹಡಿಯಲ್ಲಿ ತುಂಬಿಕೊಂಡಿದೆ. ಬೆಳಿಗ್ಗೆಯಿಂದ ಜೆಸಿಬಿ ಯಂತ್ರ ಹಾಗೂ ಪೌರ ಕಾರ್ಮಿಕರಿಂದ ಚರಂಡಿಗಳನ್ನೆಲ್ಲ ಸ್ವಚ್ಛಗೊಳಿಸುವ ಕಾರ್ಯ ಮುಂದುವರಿದಿದೆ’ ಎಂದು ಆರೋಗ್ಯ ನಿರೀಕ್ಷಕ ಉಸ್ತಾದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.