ಚಿಕ್ಕಸಿಂದಗಿ (ಸಿಂದಗಿ): ಹೃದಯಾಘಾತದಿಂದ ಸೋಮವಾರ ನಿಧನರಾದ ರಂಗಕರ್ಮಿ, ಚಲನಚಿತ್ರ ಹಾಸ್ಯ ನಟ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆಯವರಿಗೆ ಮಂಗಳವಾರ ಸಂಜೆ ಅಪಾರ ಸಂಖ್ಯೆ ಅಭಿಮಾನಿಗಳು, ಕುಟುಂಬದ ಸದಸ್ಯರು ಕಣ್ಣಿರಿನ ವಿದಾಯ ಹೇಳಿದರು.
ಚಿಕ್ಕಸಿಂದಗಿ ಗ್ರಾಮದಲ್ಲಿನ ರಂಗಾಶ್ರಯ ಸಭಾಭವನದಲ್ಲಿ ಇರಿಸಿದ ಪಾರ್ಥಿವ ಶರೀರಕ್ಕೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಎ.ಎಸ್.ಪಾಟೀಲ ನಡಹಳ್ಳಿ, ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ಉಮಾಶ್ರೀ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪೀರ ವಾಲೀಕಾರ ಒಳಗೊಂಡಂತೆ ಅಪಾರ ಸಂಖ್ಯೆಯಲ್ಲಿ ರಂಗಭೂಮಿ ಕಲಾವಿದರು, ನಾಡಿನ ಮೂಲೆ, ಮೂಲೆಯಿಂದ ಬಂದಿದ್ದ ಅಭಿಮಾನಿಗಳು ಅಂತಿಮ ಗೌರವ ಸಲ್ಲಿಸಿದರು.
ರಂಗಾಶ್ರಯ ಆವರಣದಲ್ಲಿ ಸಿಂದಗಿಯ ರಾಜಶೇಖರ ಕೂಚಬಾಳ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಗೆಳೆಯರ ಬಳಗ ಆಯೋಜನೆ ಮಾಡಿದ್ದ ರಾಜು ತಾಳಿಕೋಟೆಯವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ರಂಗಕರ್ಮಿ ರಾಜು ತಾಳಿಕೋಟೆಯವರ ನಿಧನ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ. ಯಾವುದೇ ಹಿನ್ನೆಲೆ ಇಲ್ಲದಿದ್ದರೂ ತಾಳಿಕೋಟಿ ಖಾಸ್ಗತ್ತೇಶ್ವರ ಮಠದಲ್ಲಿ ಇದ್ದುಕೊಂಡು ಸಮಾಜಮುಖಿಯಾಗಿ ಬೆಳೆದು ಬಂದವರು. ಎಲ್ಲರನ್ನೂ ನಗಿಸಿ, ನಗು– ನಗುತ್ತ ನಮ್ಮಿಂದ ದೂರಾಗಿದ್ದಾರೆ’ ಎಂದರು.
ರಾಜು ತಾಳಿಕೋಟೆಯವರ ಹೆಸರು ಜಿಲ್ಲೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ರಂಗ ಸಮಾಜದ ಶ್ರೀಧರ ಹೆಗಡೆ, ‘ರಾಜು ತಾಳಿಕೋಟೆಯವರು ಚಿಕ್ಕಸಿಂದಗಿಯಲ್ಲಿ ನಿರ್ಮಿಸಿರುವ ರಂಗಾಶ್ರಯವನ್ನು ಸರ್ಕಾರ ಸ್ಮಾರಕನ್ನಾಗಿಸಿ ಯುವ ಕಲಾವಿದರಿಗೆ ರಂಗ ತರಬೇತಿ ನೀಡುವ ಕೇಂದ್ರವಾಗಬೇಕು’ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ಉಮಾಶ್ರೀ ನುಡಿನಮನ ಸಲ್ಲಿಸಿ, ‘ಅರಿಷಿಣಗೋಡಿ ನಾಟಕ ಕಂಪನಿಯಲ್ಲಿ ಬಸ್ ಕಂಡಕ್ಟರ್ ನಾಟಕದಲ್ಲಿ ರಾಜು ತಾಳಿಕೋಟೆ ನನ್ನ ಜೊತೆ ಕಂಡಕ್ಟರ್ ಪಾತ್ರ ಮಾಡಿದ್ದರು. ಕಲಿಯುಗದ ಕುಡುಕ ನಾಟಕ ನಾಡಿನ ಮನೆ ಮಾತಾಗಿತ್ತು. ರಾಜು ಬಗ್ಗೆ ನನಗೆ ಅಪಾರ ಹೆಮ್ಮೆ. ತುಂಬಾ ಹಠಮಾರಿ ಸ್ವಯಂ ಬುದ್ಧಿಶಕ್ತಿಯಿಂದ ಮೇಲೆ ಬಂದವರು. ಅವರ ಹಠ, ಛಲ ಅವರ ಬದುಕನ್ನು ಹಸನಾಗಿಸಿತು. ಅವರು ಇನ್ನೂ ಮಾಡಬೇಕಾದ ರಂಗಭೂಮಿ ಕೆಲಸ ತುಂಬಾ ಇತ್ತು’ ಎಂದು ಸ್ಮರಿಸಿದರು.
ಮುದ್ದೇಬಿಹಾಳ ಶಾಸಕ ಸಿಎಸ್.ನಾಡಗೌಡ ಅವರು, ರಾಜು ತಾಳಿಕೋಟೆ ಸರಳ ವ್ಯಕ್ತಿಯಾಗಿದ್ದರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರಿಲ್ಲದ ಕಲಾಲೋಕ ಬಡವಾಗಿದೆ. ಅವರು ಇನ್ನೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.
ರಾಜಶೇಖರ ಕೂಚಬಾಳ ಮಾತನಾಡಿ, ‘ರಾಜು ತಾಳಿಕೋಟೆ ಉತ್ತರಕರ್ನಾಟಕದ ಗಟ್ಟಿ ಭಾಷೆಯನ್ನು ನಾಡಿನಾದ್ಯಂತ ಪ್ರಚುರಪಡಿಸಿದ್ದಾರೆ. ಅವರ ಕನಸಿನ ರಂಗಾಶ್ರಯ ರಂಗ ಚಟುವಟಿಕೆಯ ಕೇಂದ್ರವಾಗಬೇಕು. ಅದನ್ನು ಪುನಶ್ಚೇತನಗೊಳಿಸಿ ಸ್ಮಾರಕವಾಗಿ ನಿರ್ಮಾಣಗೊಳಿಸುವ ಕಾರ್ಯ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರಿಂದ ಆಗಬೇಕು’ ಎಂದು ಕೇಳಿಕೊಂಡರು.
ಮಾಜಿ ಶಾಸಕರಾದ ರಮೇಶ ಭೂಸನೂರ, ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಬಿ.ಎಸ್.ಪಾಟೀಲ ಯಾಳಗಿ, ವೈ.ಸಿ.ಮಯೂರ, ಶಿವಪುತ್ರ ಬಾಗೇವಾಡಿ, ಸಿದ್ಧಲಿಂಗ ಚೌಧರಿ, ನಾನಾಗೌಡ ಪಾಟೀಲ, ರಂಗಕರ್ಮಿ ದಯಾನಂದ ಬೀಳಗಿ, ಜ್ಯೋತಿ ಕಲ್ಲೂರ, ಪ್ರೇಮಾ ಗುಳೇದಗುಡ್ಡ, ಸಿದ್ದು ನಾಲತವಾಡ, ದಸ್ತಗೀರ ಮುಲ್ಲಾ, ಸಂತೋಷ ಪಾಟೀಲ ಡಂಬಳ, ಶಕ್ತಿಕುಮಾರ ವಿಜಯಪುರ ಕಂಬನಿ ಮಿಡಿದರು.
ಸಂಜೆ ರಂಗಾಶ್ರಯ ಆವರಣದಿಂದ ರಾಜು ತಾಳಿಕೋಟೆಯವರ ಅಂತಿಮ ಯಾತ್ರೆ ಹೊರಟು ಚಿಕ್ಕಸಿಂದಗಿ ಗ್ರಾಮದ ಖಬರಸ್ಥಾನದಲ್ಲಿ ಮುಸ್ಲಿಂ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಯಿತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.