ADVERTISEMENT

ವಿಮಾನ ನಿಲ್ದಾಣ ಕಾಮಗಾರಿ ವರದಿ ನೀಡಿ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 15:19 IST
Last Updated 29 ಅಕ್ಟೋಬರ್ 2020, 15:19 IST
ವಿಜಯಪುರದಲ್ಲಿ ಗುರುವಾರ ನಡೆದ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ಮಾತನಾಡಿದರು 
ವಿಜಯಪುರದಲ್ಲಿ ಗುರುವಾರ ನಡೆದ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ಮಾತನಾಡಿದರು    

ವಿಜಯಪುರ:ತಾಲ್ಲೂಕಿನ ಮದಬಾವಿ ಹಾಗೂ ಬುರಣಾಪೂರ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆ, ನೀರು ಪೂರೈಕೆ ಹಾಗೂ 1000 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟಂತೆ ತಕ್ಷಣ ಖರ್ಚು ವೆಚ್ಚ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವಪರ್ಯಾಯ ರಸ್ತೆ ಕುರಿತು ತಕ್ಷಣ ಭೂಸ್ವಾಧೀನ, ರಸ್ತೆ ನಿರ್ಮಾಣ ವೆಚ್ಚ ಕುರಿತಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ADVERTISEMENT

ಈ ಹಿಂದೆ 2012ರಲ್ಲಿ ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ನೀರಿನ ಪೂರೈಕೆ ಕುರಿತು ₹ 15 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯದ ಪರಿಸ್ಥಿತಿಗೆ ಪೂರಕವಾಗಿ ಜಲಸಂಪನ್ಮೂಲದ ಶಾಶ್ವತ ಪರಿಹಾರದ ಬಗ್ಗೆ ಖರ್ಚು, ವೆಚ್ಚ ವರದಿ ಮತ್ತು ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆ ಪರಿಶೀಲನಾ ವರದಿ ಸಲ್ಲಿಸುವಂತೆ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ 1000 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಅಗತ್ಯತೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ತಕ್ಷಣ ವಿತರಣಾ ಕೇಂದ್ರ ಖರ್ಚು, ವೆಚ್ಚ ವರದಿ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ 10 ದಿನಗಳ ಅವಧಿಯಲ್ಲಿ ಖರ್ಚು, ವೆಚ್ಚಗಳ ವರದಿಗಳನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಮದಬಾವಿ ಹಾಗೂ ಬುರಣಾಪೂರ ಗ್ರಾಮಗಳ ಮಧ್ಯದಲ್ಲಿ ವಿಮಾನ ನಿಲ್ದಾಣಕ್ಕಾಗಿ ಕೆಐಎಡಿಬಿಯಿಂದ 727 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಟಿಆರ್–72 ವಿಮಾನ ನಿಲ್ದಾಣ ಹಾರಾಟಕ್ಕಾಗಿ ಒಟ್ಟು ₹ 220 ಕೋಟಿ ನಿಗದಿಪಡಿಸಿ, ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಕಾಮಗಾರಿಯನ್ನು ಎರಡು ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲನೇ ಹಂತದ ಕಾಮಗಾರಿಗಳಿಗೆ ₹95 ಕೋಟಿ ಮಂಜೂರಾತಿ ದೊರೆತಿದೆ. ಮೊದಲನೇ ಹಂತದ ಕಾಮಗಾರಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿದ್ದು, ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ ಎಂದು ಹೇಳಿದರು.

ವಿಮಾನ ನಿಲ್ದಾಣದ ಮೊದಲನೇ ಹಂತದ ಕಾಮಗಾರಿಗಳಾದ ಗ್ರೌಂಡ್ ಲೇವಲಿಂಗ್, ರನ್ ವೇ, ಟ್ಯಾಕ್ಸಿ ವೇ, ಅಪ್ರಾನ್, ಐಸೋಲೇಶನ್ ವೇ, ಭೂಸ್ವಾಧೀನ ಪಡೆದ ಸ್ಥಳದಲ್ಲಿ ಅಪ್ರೋಚ್ ರೋಡ್ ಮತ್ತು ಆಂತರಿಕ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಗಳು ಒಳಗೊಂಡಿವೆ ಎಂದರು.

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಎಂ ಪಾಟೀಲ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಶೀಲ್ದಾರ್‌ ಮೋಹನಕುಮಾರಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಜೂಮದಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.