ADVERTISEMENT

ರಸ್ತೆ ಬದಿಯ ಅಂಗಡಿ ತೆರವು

ಹಳೆ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 6:15 IST
Last Updated 20 ಜೂನ್ 2018, 6:15 IST
ವಿಜಯಪುರದ ಹಳೆ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ರಸ್ತೆಗೆ ಇಟ್ಟುಕೊಂಡಿದ್ದ ಹಣ್ಣಿನ ಅಂಗಡಿ ತೆರವುಗೊಳಿಸಲು ಹೋದ ಸಂಧರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತಿನಚಕಮಕಿ ನಡೆಯಿತು
ವಿಜಯಪುರದ ಹಳೆ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ರಸ್ತೆಗೆ ಇಟ್ಟುಕೊಂಡಿದ್ದ ಹಣ್ಣಿನ ಅಂಗಡಿ ತೆರವುಗೊಳಿಸಲು ಹೋದ ಸಂಧರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತಿನಚಕಮಕಿ ನಡೆಯಿತು   

ವಿಜಯಪುರ: ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದ ಅಂಗಡಿಗಳನ್ನು ಪುರಸಭಾ ಸಿಬ್ಬಂದಿ ತೆರವು ಮಾಡಿದರು.

ಇಲ್ಲಿನ ಹಳೆ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿನ ರಸ್ತೆಯಲ್ಲಿ ದ್ವಿಚಕ್ರ ವಾಹನಗಳೂ ಸಂಚಾರ ಮಾಡಲಿಕ್ಕೆ ಸಾಧ್ಯವಾಗದ ರೀತಿಯಲ್ಲಿ ರಸ್ತೆಗೆ ಅಂಗಡಿಗಳನ್ನು ಇಟ್ಟುಕೊಂಡಿದ್ದರು. ಜನರಿಂದ ಬಂದಿದ್ದ ದೂರುಗಳನ್ನು ಆಧರಿಸಿ ತೆರವು ಕಾರ್ಯಾಚರಣೆ ನಡೆಸಲಾಯಿತು‘ಎಂದು ಪುರಸಭಾ ಅಧಿಕಾರಿಗಳು ತಿಳಿಸಿದರು. ಹಣ್ಣಿನಂಗಡಿಯನ್ನು ತೆರವು ಗೊಳಿಸಲು ಹೋದಾಗ ಅಂಗಡಿ ಇಟ್ಟಿದ್ದ ಮಾಲೀಕರು ಹಾಗೂ ಪುರಸಭಾ ಅಧಿಕಾರಿಗಳೊಂದಿಗೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಈವರೆಗೂ ನಾಲ್ಕೈದು ಬಾರಿ ಅಂಗಡಿಗಳನ್ನು ತೆರವು ಮಾಡಲು ಬಂದಿದ್ದ ಅಧಿಕಾರಿಗಳು, ಒತ್ತಡಗಳಿಗೆ ಮಣಿದು ತೆರವು ಮಾಡುವುದನ್ನು ಬಿಟ್ಟು ವಾಪಸ್‌ ಹೋಗುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಳ್ಳುತ್ತಿರುವ ಅಂಗಡಿಯ ಮಾಲೀಕರು, ನೇರವಾಗಿ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಾರೆ ಎಂದು ಇಲ್ಲಿನ ನಿವಾಸಿಗಳಾದ ಅಶೋಕ್ ಕುಮಾರ್, ಮುನಿರಾಜು, ನಾರಾಯಣಸ್ವಾಮಿ, ಗಿರೀಶ್ ಕುಮಾರ್ ಆರೋಪಿಸಿದರು.

ADVERTISEMENT

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ‘ಲೋಕಸಭಾ ಸದಸ್ಯರ ನಿಧಿಯಿಂದ 3 ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ 2016 ರಲ್ಲಿ ₹10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈವರೆಗೂ ಅದನ್ನು ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಪುರಸಭೆಯ ಜಾಗವನ್ನು ನಾವು ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಿಕ್ಕಾಗಿ ಕೊಡಬೇಕಾಗಿದೆ. ಆದ್ದರಿಂದ ಪುರ ಸಭೆಯ ಸ್ವತ್ತನ್ನು ತೆರವುಗೊಳಿಸಲು ಮುಂದಾಗಿದ್ದೇವೆ’ ಎಂದರು.

‘ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಕೊಳ್ಳುವ ವ್ಯಾಪಾರಸ್ಥರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ, ಪರ್ಯಾಯವಾಗಿ ವಾಹನ ದಟ್ಟಣೆ ಇಲ್ಲದೆ ಇರುವ ಕಡೆಗಳಲ್ಲಿ ಬಂಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸಿಕೊಳ್ಳಲು ತಿಳಿಸಿದ್ದೇವೆ. ಹಣ್ಣಿ ನಂಗಡಿಯನ್ನು ತೆರವುಗೊಳಿಸಲು ಒಂದು ವಾರ ಕಾಲಾವಕಾಶಕೇಳಿದ್ದಾರೆ. ಆದ್ದರಿಂದ ಅದನ್ನು ತೆರವು ಮಾಡಿಲ್ಲ. ಒಂದು ವಾರದನಂತರವೂ ತೆರವು ಮಾಡದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಜನರಿಗೆ ತೊಂದರೆ ಯಾಗದ ರೀತಿಯಲ್ಲಿ ವ್ಯಾಪಾರ ವಹಿವಾಟುಗಳು ಮಾಡಿಕೊಳ್ಳಲು ಯಾರೂ ಅಡ್ಡಿಯುಂಟು ಮಾಡು ವುದಿಲ್ಲ’ ಎಂದರು. ಪುರಸಭಾ ಆರೋಗ್ಯ ಅಭಿಯಂತರೆ ಚಿತ್ರಾ, ಕಂದಾಯ ನಿರೀಕ್ಷಕ ಜಯ ಕಿರಣ್, ಅಧಿಕಾರಿಗಳಾದ ಗೋಪಾಲ್, ಮಂಜುನಾಥ್, ಇದ್ದರು.

ಹಣ್ಣಿನ ಅಂಗಡಿಯ ಮಾಲೀಕ ಅಂಗವಿಕಲ ಆಗಿರುವುದರಿಂದ ಕಾಲಾವಕಾಶ ಕೇಳಿದ್ದಾರೆ. ಒಂದು ವಾರ ಕಾಲಾವಕಾಶ ನೀಡಲಾಗಿದೆ
– ನಿಸರ್ಗ ನಾರಾಯಣಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.