ವಿಜಯಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ಶತಮಾನೋತ್ಸವ ಪೂರ್ಣಗೊಳಿಸಿರುವ ಈ ಹೊತ್ತಿನಲ್ಲಿ ಸಮಾಜದ ಮುಂದೆ ಪಂಚತತ್ವ ಪಾಲನೆಗೆ ಕರೆ ನೀಡುತ್ತಿದ್ದು, ಇವುಗಳ ಅನುಷ್ಠಾನಕ್ಕೆ ಪ್ರತಿಯೊಬ್ಬ ಹಿಂದು ಕೈಜೋಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಮನವಿ ಮಾಡಿದರು.
ನಗರದ ದರಬಾರ್ ಮೈದಾನದಲ್ಲಿ ಶನಿವಾರ ಆರ್‌ಎಸ್‌ಎಸ್ ಆಯೋಜಿಸಿದ್ದ ವಿಜಯ ದಶಮಿ ಉತ್ಸವದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯರೂ ಸತ್ವ ಭರಿತವಾಗಬೇಕು, ಸ್ವಾಭಿಮಾನ ಬೆಳೆಸಿಕೊಳ್ಳಬೇಕು, ಆತ್ಮ ವಿಶ್ವಾಸದಿಂದ ಮುನ್ನೆಡೆಯಬೇಕು, ಸ್ವದೇಶಿ ಬದುಕು ತಮ್ಮದಾಗಿಕೊಳ್ಳಬೇಕು ಎಂದರು.
ಪ್ರತಿಯೊಬ್ಬರೂ ಜಾತಿ, ಬೇಧ ಮರತು ಸಹೋದರರಂತೆ ಬದುಕಬೇಕು, ಜಾತಿ ಎಂಬುದು ಅಪಮಾನದ ಸಂಕೇತ ಆಗಬಾರದು, ಎಲ್ಲರ ಮನೆಯಲ್ಲೂ ಎಲ್ಲರಿಗೂ ಪ್ರವೇಶ ಸಿಗುವಂತಾಗಬೇಕು, ಹಿಂದುಗಳು ಬದುಕಿನಲ್ಲಿ ಹಿಂದುತ್ವ ಅಳವಡಿಸಿಕೊಳ್ಳಬೇಕು, ಪ್ರತಿಯೊಂದು ಮನೆಯೂ ಸಂಸ್ಕಾರದ ಕೇಂದ್ರವಾಗಬೇಕು ಎಂದರು.
ಪ್ರತಿಯೊಬ್ಬರೂ ನಮ್ಮ ಭೂಮಿ ತಾಯಿ, ಪ್ರಕೃತಿ ಮಾತೆಯ ಋಣ ತೀರಿಸುವ ಕಾರ್ಯ ಮಾಡಬೇಕು. ಪ್ರಕೃತಿ, ಪರಿಸರ ಮಾಲಿನ್ಯವಾಗದಂತೆ ಕಾಪಾಡಬೇಕು ಎಂದರು.
ದೇಶದ ಪ್ರತಿಯೊಬ್ಬರೂ ಚುನಾವಣೆಯಲ್ಲಿ ತಮ್ಮ ಹಕ್ಕು ಕಡ್ಡಾಯವಾಗಿ ಚಲಾಯಿಸಬೇಕು, ಕಾನೂನು ಪಾಲನೆ ಮಾಡಬೇಕು, ಶಿಷ್ಟಾಚಾರ ಕಾಪಾಡಬೇಕು, ನಮ್ಮಿಂದ ಯಾರಿಗೂ ತೊಂದರೆಯಾಗದಂತೆ ಬದುಕಬೇಕು ಎಂದರು.
ಸಮಾಜ ಸ್ವೀಕಾರ:
‘ಆರ್‌ಎಸ್‌ಎಸ್ ನೂರು ವರ್ಷ ಪೂರೈಸುವಲ್ಲಿ ಅನೇಕರ ತ್ಯಾಗ, ಬಲಿದಾನ, ಶ್ರಮ ಇದೆ. ಮೂರ್ಖರ ಸಂಘ ಎಂದು ಅಪಹಾಸ್ಯ ಮಾಡಿದರು. ಆದರೆ, ಸಂಘವು ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರದ ಹಿತ, ಹಿಂದೂ ಧರ್ಮದ ಏಳಿಗೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಶ್ರಮಿಸುತ್ತಿದೆ. ಪರಿಣಾಮ ದೇಶದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ, ಇಂದು ಜನರು ಸ್ವಾಗತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘವನ್ನು ಸಮಾಜ ಸ್ವೀಕಾರ ಮಾಡಿದೆ’ ಎಂದು ಹೇಳಿದರು.
‘ಭವಿಷ್ಯದಲ್ಲಿ ತಮಗೆ ರಾಜಕೀಯವಾಗಿ ಪ್ರತಿಸ್ಪರ್ಧಿಯಾಗಬಹುದು ಎಂದು ಗಾಂಧಿ ಕೊಂದ ಆರೋಪವನ್ನು ಸಂಘದ ಮೇಲೆ ಹೊರಿಸಿ, ನಿಷೇಧ ಹೇರಿದರು. ಅಲ್ಲದೇ, ಅನೇಕ ಸ್ವಯಂ ಸೇವಕರನ್ನು ಜೀವಂತವಾಗಿ ಸುಡಲಾಯಿತು. ಆದರೆ, ಸಂಘ ಎಂದೂ ಪ್ರತಿಕಾರ ಮಾಡಲಿಲ್ಲ. ವಿರೋಧದ ನಡುವೆಯೂ ಸಂಘ ಕೆಲಸ ಮಾಡಿತು’ ಎಂದು ಹೇಳಿದರು.
‘ಹಿಂದು ಎಂದು ಹೇಳಿಕೊಳ್ಳಲು ಅಂಜುವ ಸ್ಥಿತಿ ದೇಶದಲ್ಲಿ ಇತ್ತು. ಆದರೆ, ಇಂದು ಹಿಂದು ಎಂಬ ಸ್ವಾಭಿಮಾನ ಮೂಡಿದೆ. ಇಡೀ ದೇಶ ಹಿಂದುಮಯವಾಗುತ್ತಿದೆ. ಹಿಂದೂ ಎಂದರೆ ಹೇಡಿ ಎಂಬ ಭಾವ ಬದಲಾಗಿದೆ. ಹಿಂದೂ ಎಂದರೆ ಫಲಾಯನವಾದಿಯಲ್ಲ, ಪರಾಕ್ರಮಿ ಎಂಬ ಭಾವ ಮೂಡಿದೆ’ ಎಂದರು.
ಆರ್‌ಎಸ್‌ಎಸ್ ಪ್ರಮುಖ ವಿಠಲ ಪರಾಂಡೆ, ಜಿಲ್ಲಾ ಸಂಘ ಚಾಲಕ ರಾಮಸಿಂಗ್ ಹಜೇರಿ ಇದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸಮಾಜ ಕೇವಲ ಸ್ವೀಕರಿಸಿದರೆ ಸಾಲದು ಸಂಘದ ವಿಚಾರಗಳನ್ನು ಅನುಸರಿಸಬೇಕುಗೋಪಾಲ ನಾಗರಕಟ್ಟೆಅಖಿಲ ಭಾರತೀಯ ಕಾರ್ಯದರ್ಶಿ ವಿಎಚ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.