ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:53 IST
Last Updated 29 ಸೆಪ್ಟೆಂಬರ್ 2020, 16:53 IST
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ  ಆಗ್ರಹಿಸಿ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್‌ ಅವರಿಗೆ ಮನವಿ ಸಲ್ಲಿಸಲಾಯಿತು
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ  ಆಗ್ರಹಿಸಿ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್‌ ಅವರಿಗೆ ಮನವಿ ಸಲ್ಲಿಸಲಾಯಿತು   

ವಿಜಯಪುರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹಾಗೂಬೂದಿಹಾಳ ಗ್ರಾಮದ ಮುಖಂಡ ಅನಿಲ ಇಂಗಳಗಿ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್‌ ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಮೆರವಣಿಗೆ ಮಾಡಲಾಯಿತು.

ಸಮಿತಿರಾಜ್ಯ ಘಟಕದ ಅಧ್ಯಕ್ಷಮಾಪಣ್ಣ ಹದನೂರ ಮಾತನಾಡಿ, ಎ.ಜೆ.ಸದಾಶಿವ ಆಯೋಗದ ವರದಿಯನ್ನು ತ್ವರಿತಗತಿಯಲ್ಲಿ ಜಾರಿಗೆ ತರುವ ಸಂಬಂಧ ಸುಪ್ರಿಂಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಹತ್ಯೆಯಾದ ಅನಿಲ ಇಂಗಳಗಿ ಅವರ ಮನೆಗೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ₹50 ಲಕ್ಷ ಹಾಗೂ 10 ಎಕರೆ ಜಮೀನು ಹಾಗೂ ಅವರ ಮನೆ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಬೇಡಿಕೆಗಳನ್ನು ಪೂರೈಸದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಮಾದಿಗ ದಂಡೋರಾ, ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ ಹಾಗೂ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಸಾಸನೂರ ಮಾತನಾಡಿ, ಅನಿಲಇಂಗಳಗಿ ಹತ್ಯೆ ಮಾಡಿದ ಪುಂಡರನ್ನು ಬಂಧಿಸಿ ಅವರ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಂಡು, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜಾತಿಯ ವಿಷ ಬೀಜ ಬಿತ್ತುವ ಸವರ್ಣಿಯವರ ಮೆಲೆ ಕ್ರಮಕೈಕೊಳ್ಳಬೇಕು. ಬೂದಿಹಾಳ ಗ್ರಾಮದ ದಲಿತ ಅನಿಲ ಇಂಗಳಗಿ ಕುಟುಂಬಕ್ಕೆ ಹೆಚ್ಚಿನ ಸಹಾಯ ಧನ ಕೊಡಿಸಬೇಕು. ಎಸ್‌ಸಿ ಸಮಾಜದವರ ಮೇಲೆ ಸರ್ಕಾರಿ ಅಧಿಕಾರಿಗಳ ದರ್ಪ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರತಿ ಗ್ರಾಮ, ತಾಲ್ಲೂಕು, ಜಿಲ್ಲೆಯಲ್ಲಿ ಎಸ್‌ಸಿ ಸಮಾಜದವರಿಗೆ ಮೀಸಲಿಟ್ಟಿರುವ ಅನುದಾನ ಸದ್ಭಳಕೆಯಾಗುವಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ರುದ್ರಭೂಮಿ ಸಮಸ್ಯೆ ಇದ್ದು, ಅದನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸಬೇಕು ಹಾಗೂ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ರುದ್ರಭೂಮಿ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

ಮುಖಂಡರಾದ ಸಂಜೀವ ಲೋಣಿ, ಅಶೋಕ ಕರೆಕಲ್ಲ, ಬಸಗೊಂಡಪ್ಪ ಹಾದಿಮನಿ, ಶರಣು ದೊಡಮನಿ, ರವಿ ಕೆಂಗಾರ, ಸುಭಾಸ ಗಾಯಕವಾಡ, ಮಲಕಪ್ಪ ಹಾದಿಮನಿ, ಕೆಂಚಪ್ಪ ಗುಂಡಳ್ಳಿ, ಸದಾಶಿವ ಚಿಮ್ಮಲಗಿ, ಅಶೋಕ ನಡುವಿನಮನಿ, ವಿಠ್ಠಲ ಆಸಂಗಿ, ಬಸವರಾಜ ಒಣಕಿಹಾಳ, ಸದಾನಂದ ಗುನ್ನಾಪುರ, ರವಿ ದೊಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.