ADVERTISEMENT

ಜ್ಞಾನಭಾರತಿ ವಿದ್ಯಾಮಂದಿರದ ಕಿರೀಟ

ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆ; ಗುಣಮಟ್ಟಕ್ಕೆ ಹೆಸರುವಾಸಿ

ಶಾಂತೂ ಹಿರೇಮಠ
Published 21 ಜೂನ್ 2019, 13:35 IST
Last Updated 21 ಜೂನ್ 2019, 13:35 IST
ಸಿಂದಗಿಯ ಜ್ಞಾನಭಾರತಿ ವಿದ್ಯಾಮಂದಿರದ ಆವರಣದಲ್ಲಿ ಮಕ್ಕಳಿಗೆ ಕೈ ತುತ್ತು ತಿನ್ನಿಸಿದ ನೋಟ (ಸಂಗ್ರಹ ಚಿತ್ರ)
ಸಿಂದಗಿಯ ಜ್ಞಾನಭಾರತಿ ವಿದ್ಯಾಮಂದಿರದ ಆವರಣದಲ್ಲಿ ಮಕ್ಕಳಿಗೆ ಕೈ ತುತ್ತು ತಿನ್ನಿಸಿದ ನೋಟ (ಸಂಗ್ರಹ ಚಿತ್ರ)   

ಸಿಂದಗಿ: ಪಟ್ಟಣದ ಭೀಮಾಶಂಕರ ಮಠ, ಸಂಗಮೇಶ್ವರ, ಶರಣಬಸವೇಶ್ವರ, ಅಕ್ಕಮಹಾದೇವಿ ದೇವಸ್ಥಾನಗಳಲ್ಲಿ ವರ್ಗಗಳನ್ನು ಪ್ರಾರಂಭಿಸಿದ ಜ್ಞಾನಭಾರತಿ ವಿದ್ಯಾಮಂದಿರ ಸುಸಜ್ಜಿತ, ಭವ್ಯ ಸುಂದರ ಪರಿಸರದಲ್ಲಿನ ಕಟ್ಟಡದಲ್ಲಿ 2018ರಲ್ಲಿ ರಜತ ಮಹೋತ್ಸವ ಆಚರಿಸಿಕೊಳ್ಳುವ ಮೂಲಕ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಸೇರಿದೆ.

1993ರಲ್ಲಿ ವರ್ತಕ ನೆಹರೂ ಪೋರವಾಲ ಅಧ್ಯಕ್ಷತೆಯಲ್ಲಿ ಈ ವಿದ್ಯಾಮಂದಿರ ಸ್ಥಾಪನೆಗೊಂಡಿತು. ಮಡಿವಾಳಯ್ಯ ಹಿರೇಮಠ ಅವರು ಈ ಶಾಲೆಯ ಕಾರ್ಯದರ್ಶಿಯಾದ ಬಳಿಕ ಇದು ಹೆಮ್ಮರವಾಗಿ ಬೆಳೆದಿದೆ. ಆರಂಭದಲ್ಲಿ ಕಾರವಾರ ಜಿಲ್ಲೆಯ ಪ್ರೇಮಾ ನಾಯ್ಕ ನೇತೃತ್ವದ ಬೋಧನಾ ಸಿಬ್ಬಂದಿ ಭದ್ರ ಬುನಾದಿ ಹಾಕಿದರು.

ವಿದ್ಯಾಮಂದಿರ ಕಟ್ಟಡಕ್ಕೆ ಶಾಂತಿಲಾಲ ಪೋರವಾಲ, ಹೊನ್ನಪ್ಪಗೌಡ ಬಿರಾದಾರ ಅವರು ಬಸವನಗರದಲ್ಲಿನ ಬೆಲೆ ಬಾಳುವ ಜಾಗೆಯನ್ನು ದಾನವಾಗಿ ನೀಡಿದರು. ಇನ್ನಷ್ಟು ಜಾಗೆಯನ್ನು ಖರೀದಿಸಿ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಜನಪ್ರತಿನಿಧಿಗಳ ಅನುದಾನ ಹಾಗೂ ದಾನಿಗಳ ಸಹಾಯ, ಸಹಕಾರದಿಂದ 32 ಶಾಲಾ ಕೊಠಡಿಗಳು ನಿರ್ಮಾಣಗೊಂಡಿವೆ.

ADVERTISEMENT

ವಿದ್ಯಾಮಂದಿರ ಏಳು ಅಂಗ ಸಂಸ್ಥೆಗಳನ್ನು ಹೊಂದಿದೆ. ಶಿಶುವಿಹಾರದಿಂದ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಕೋರ್ಸುಗಳಿವೆ. ಈಗ 1,200 ರಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಉತ್ತಮ ಗ್ರಂಥಾಲಯ, ಪ್ರಯೋಗಾಲಯ, ಗಣಕಯಂತ್ರ ವಿಭಾಗ, ಸಂಗೀತ ಪಾಠಶಾಲೆ, ಎಲ್‌ಸಿಡಿ ಪರದೆ, ಪ್ರಾಜೆಕ್ಟರ್‌ಗಳ ಮೂಲಕ ಬೋಧಿಸಲಾಗುತ್ತಿದೆ. 45 ವಿದ್ಯಾರ್ಥಿಗಳನ್ನು ಒಳಗೊಂಡ ಜಿಲ್ಲೆಯ ಏಕಮೇವ ಬ್ಯಾಂಡ್ ವಾದ್ಯ ಮೇಳ ಈ ಶಾಲೆಯಲ್ಲಿದೆ.

ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ-ಬೆಳೆಸುವ ಹೆಚ್ಚುವರಿ ಬೋಧನೆ, ಪ್ರತಿ ದಿನ ಬೆಳಿಗ್ಗೆ ಮಂತ್ರಮುಗ್ಧರನ್ನಾಗಿಸುವ ಸಾಮೂಹಿಕ ಪ್ರಾರ್ಥನೆ ಕಡ್ಡಾಯವಾಗಿ ಇಲ್ಲಿ ನಡೆಯುತ್ತದೆ.

ಸಂಗೀತ, ನೃತ್ಯ ಈ ಶಾಲೆಯ ವಿಶೇಷ. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಶಾಲೆಯ ಮಕ್ಕಳು ಪ್ರದರ್ಶಿಸಿದ ಸಾಮೂಹಿಕ ನೃತ್ಯ ವಿಶೇಷ ಬಹುಮಾನ ಪಡೆದುಕೊಂಡಿತು. ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಾಲ್ಕು ಬಾರಿ ರಾಜ್ಯಮಟ್ಟದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ಕೂಡ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ.

ಶಾಲೆಯಲ್ಲಿ ಪ್ರತಿ ವರ್ಷ ಪೋಷಕರು- ಮಕ್ಕಳ ಸಂಬಂಧ ಗಟ್ಟಿಗೊಳ್ಳಲು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದರಲ್ಲಿ ತಾಯಂದಿರರ ಕೈತುತ್ತಿನ ಊಟ ಪ್ರಮುಖವಾದುದು. ಇಲ್ಲಿಯ ಶಿಕ್ಷಕಿಯರು ಮಕ್ಕಳೊಂದಿಗೆ ಮಕ್ಕಳಾಗಿ ಆಟ, ಪಾಠದಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳುತ್ತಾರೆ.

ಈ ಮಂದಿರದ ಬೆಳವಣಿಗೆಗೆ ಶಾಲೆಯ ಹಿಂದಿನ ಅಧ್ಯಕ್ಷ ರೇ.ಚ.ರೇವಡಿಗಾರ, ಈಗಿನ ಅಧ್ಯಕ್ಷ ಶಿವಾನಂದ ಶಿವಾಚಾರ್ಯರು ಹಾಗೂ ಈಗಿನ ಕಾರ್ಯದರ್ಶಿ ಸತೀಶ ಮಡಿವಾಳಯ್ಯ ಹಿರೇಮಠ ಅವರ ಪಾತ್ರ ಮಹತ್ವದ್ದಾಗಿದೆ. ಮುಖ್ಯಗುರು ಜಗದೀಶ ಪಾಟೀಲ, ಪ್ರಾಚಾರ್ಯ ಜಗದೇವಿ ನಂದಿಕೋಲ ಹಾಗೂ ಸಿಬ್ಬಂದಿಯ ಶ್ರಮವೂ ಅಡಗಿದೆ.

‘ಶಾಲೆ-ಕಾಲೇಜುಗಳು ಆಧುನಿಕ ಭಾರತದ ದೇವಾಲಯಗಳು. ಇಂತಹ ಶಾಲೆಗಳು ಶರಣರು-ಸಂತರು, ಸತ್ಪುರುಷರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರೆ ಮತ್ತಷ್ಟು ಮೆರುಗನ್ನು ಹೊಂದಿ ಪ್ರಕಾಶಿಸುತ್ತವೆ. ಇದಕ್ಕೆ ಉತ್ತಮ ನಿದರ್ಶನವೇ ಜ್ಞಾನಭಾರತಿ ವಿದ್ಯಾಮಂದಿರ’ ಎಂಬುದು ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಶುಭ ನುಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.