ADVERTISEMENT

ಎಸ್‍ಸಿಪಿ-ಟಿಎಸ್‍ಪಿ | ಪರಿಣಾಮಕಾರಿ ಅನುಷ್ಠಾನ: ಜಿಲ್ಲಾಧಿಕಾರಿ ಡಾ.ಆನಂದ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:54 IST
Last Updated 19 ಅಕ್ಟೋಬರ್ 2025, 6:54 IST
ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು  ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು
ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು  ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು   

ವಿಜಯಪುರ: ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸೌಲಭ್ಯ ದೊರಕಿಸಲು ಅಧಿಕಾರಿಗಳು ಈ ಕಾಯ್ದೆಯ ಗಂಭೀರತೆಯನ್ನು ಅರಿತುಕೊಂಡು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು  ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಬೇಕು. ಸಂಬಂಧಿಸಿದ ಇಲಾಖೆಗಳು ಈ ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇದ್ದ ಸಂದರ್ಭದಲ್ಲಿ ಶೋಕಾಸ್ ನೋಟಿಸ್ ನೀಡಲು ಹಾಗೂ ನಿಗದಿತ ಅವಧಿಯಲ್ಲಿ ಎಸ್‍ಸಿಪಿ, ಟಿಎಸ್‍ಪಿ ಅನುದಾನ ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಲ್ಲಿ ಕ್ರಮ ಜರುಗಿಸಲು ಅವಕಾಶವಿರುವುದರಿಂದ ಇದಕ್ಕೆ ಆಸ್ಪದ ನೀಡದೇ, ಕಾಯ್ದೆಯ ಗಂಭೀರತೆಯನ್ನು ಅರಿತುಕೊಂಡು, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅರ್ಹರಿಗೆ ಸೌಲಭ್ಯ ದೊರಕಿಸಲು ಅನುದಾನ ವೆಚ್ಚ ಮಾಡುವಂತೆ ಸೂಚನೆ ನೀಡಿದರು.

ADVERTISEMENT

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸಿ, ಪರಿಶೀಲನೆ ನಡೆಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾಲಕಾಲಕ್ಕೆ ಶಿಕ್ಷಣ ಇಲಾಖೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಎಸ್‍ಸಿಪಿ-ಟಿಎಸ್‍ಪಿ ಯೋಜನೆಗಳು ಲಾಭ ಫಲಾನುಭವಿಗಳಿಗೆ ತಲುಪುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು, ಈ ಯೋಜನೆಯಡಿ ಬಿಡುಗಡೆಯಾದ ಅನುದಾನ ಲ್ಯಾಪ್ಸ್‌ ಆಗದಂತೆ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದರು.

ಈ ಯೋಜನೆಯ ವಿವಿಧ ಲೆಕ್ಕಶೀರ್ಷಿಕೆಯಡಿ ಬಿಡುಗಡೆಯಾಗುವ ಅನುದಾನಕ್ಕೆ ನಿಗದಿತ ಕಾಲಾವಧಿಯಲ್ಲಿ ಕ್ರೀಯಾಯೋಜನೆ ಸಿದ್ಧಪಡಿಸಿಕೊಂಡು ಸಂಬಂಧಿಸಿದ ಇಲಾಖಾ ಮುಖ್ಯಸ್ಥರ ಅನುಮೋದನೆ ಪಡೆದುಕೊಂಡು ಫಲಾನುಭವಿಗಳ ಆಯ್ಕೆ ಮಾಡಿ, ಫಲಾನುಭವಿಗಳಿಗೆ ಲಾಭ ದೊರಕಿಸುವ ಮೂಲಕ ಶೇಕಡಾವಾರು ಪ್ರಗತಿ ಸಾಧಿಸುವಂತೆ  ಹೇಳಿದರು.

ಅಧಿಕಾರಿಗಳು ಎಸ್‍ಸಿಪಿ-ಟಿಎಸ್‍ಪಿ ಆರ್ಥಿಕ ಹಾಗೂ ಭೌತಿಕ ಸಾಧನೆಯ ನಿಖರವಾಗಿ ಮಾಹಿತಿ ಸಲ್ಲಿಸಬೇಕು. ಇಲಾಖಾವಾರು ಯೋಜನೆಯ ಮಾಹಿತಿ ಒದಗಿಸಬೇಕು. ಕೇಂದ್ರ, ರಾಜ್ಯ, ಜಿಲ್ಲಾ ಪಂಚಾಯಿತಿ ಸೇರಿದಂತೆ ಆಯಾ ವಲಯವಾರು ಪ್ರತ್ಯೇಕವಾಗಿ ಮಾಹಿತಿ ಒದಗಿಸಬೇಕು. ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಸೌಲಭ್ಯ ಒದಗಿಸಿರುವ ಕುರಿತು ನಿಖರವಾಗಿ ಮಾಹಿತಿ ಹಾಗೂ ಬಾಕಿ ಉಳಿಯಲು ಇರುವ ಕಾರಣವನ್ನು ನಿಖರವಾಗಿ ಒದಗಿಸಬೇಕು ಎಂದರು.

ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಫಲಾನುಭವಿ ಆಯ್ಕೆ, ಸೌಲಭ್ಯ ದೊರಕಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್ ಸೌದಾಗರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಹೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಸಿದ್ದಪ್ಪ ಬಿಂಜಗೇರಿ ಉಪಸ್ಥಿತರಿದ್ದರು.

ಅನುದಾನ ವೆಚ್ಚ ಮಾಡದೆ ಬಾಕಿ ಉಳಿಸಿಕೊಂಡಿರುವ ಕುರಿತು ಸಬೂಬೂ ನೀಡದೆ ಬಿಡುಗಡೆಯಾದ ಅನುದಾನ ವೆಚ್ಚ ಮಾಡಿದ ಅನುದಾನಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.
– ಡಾ.ಆನಂದ ಕೆ.ಜಿಲ್ಲಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.