ADVERTISEMENT

ಏಳು ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 14:01 IST
Last Updated 19 ಆಗಸ್ಟ್ 2022, 14:01 IST
ದರೋಡೆಕೋರರಿಂದ ವಶಪಡಿಸಿಕೊಂಡಿರುವ ಮಾರಕಾಸ್ತ್ರಗಳು, ಬೈಕಿನೊಂದಿಗೆ ವಿಜಯಪುರ ಜಿಲ್ಲಾ ಪೊಲೀಸ್‌ 
ದರೋಡೆಕೋರರಿಂದ ವಶಪಡಿಸಿಕೊಂಡಿರುವ ಮಾರಕಾಸ್ತ್ರಗಳು, ಬೈಕಿನೊಂದಿಗೆ ವಿಜಯಪುರ ಜಿಲ್ಲಾ ಪೊಲೀಸ್‌    

ವಿಜಯಪುರ: ರಸ್ತೆಯಲ್ಲಿ ಸಂಚರಿಸುವಜನರನ್ನು ಅಡ್ಡಗಟ್ಟಿ ಹೆದರಿಸಿ ಹಣ, ಮೊಬೈಲ್ ಮತ್ತಿತರೆ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಏಳು ಜನ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಟ್ಟಂಗಿಹಾಳ ದೊಡ್ಡಿಯ ವಿಜಯ ಭೀರಪ್ಪ ಕರಾಡೆ, ಆನಂದ ಮಾಯಪ್ಪ ಢೇರೆ, ಹಣಮಂತ ಜಯಪ್ಪ ಖರಾತ, ಬಬಲಾದಿಯ ಕರೆವಾಡಿಯ ಸಚಿನ ಮಧು ಗೋಪಣೆ, ತಿಕ್ಕುಂಡಿಯ ನವನಾಥ ಆಮಗೊಂಡ ಕರಾಡೆ, ಸಚಿನ ವಿಲಾಸ ಕಾಳೆ, ವಿಕಾಸ ಲಕ್ಷ್ಮಣ ಢಾಣೆ ಬಂಧಿತ ಆರೋಪಿಗಳು ಎಂದು ತಿಳಿಸಿದರು.

ನಗರ ಹೊರವಲಯದ ಇಟ್ಟಂಗಿಹಾಳ ಕ್ರಾಸ್ ಬಳಿ ಆ.12 ರಂದು ಆರೇಳು ಜನ ದರೋಡೆಕೋರರುಮೂರು ಬೈಕುಗಳ ಮೇಲೆ ಬಂದು, ದಾರಿ ಹೋಕರನ್ನು ಹೆದರಿಸಿ ಹಲ್ಲೆ ಮಾಡಿ ಅವರ ಬಳಿ ಇರುವ ಹಣ, ಮೊಬೈಲ್ ಹಾಗೂ ಮತ್ತಿತರೆ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ಕುರಿತಂತೆ ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.

ADVERTISEMENT

ಈ ಪ್ರಕರಣ ಬೇಧಿಸಲು, ಡಿವೈಎಸ್‌ಪಿ ಸಿದ್ಧೇಶ್ವರ, ಇನ್ ಸ್ಪೆಕ್ಟರ್‌ ಸಂಗಮೇಶ ಪಾಲಭಾವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ತನಿಖೆ ಕೈಗೊಳ್ಳಲಾಗಿತ್ತು. ಶುಕ್ರವಾರ ಇಟ್ಟಂಗಿಹಾಳ ರಸ್ತೆಯ ಎಕ್ಸಲೆಂಟ್ ಶಾಲೆಯ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಏಳು ಜನರು ಬಂಧಿಸಿ, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದರೋಡೆ ಮಾಡಿರುವುದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಆರೋಪಿತರಿಂದ ₹28 ಸಾವಿರ ನಗದು, ₹2,500 ಮೌಲ್ಯದ ಗಡಿಯಾರ, ದರೋಡೆಗೆ ಉಪಯೋಗಿಸಿದ ಐದು ಬೈಕುಗಳು ಸೇರಿ ಸುಮಾರು ₹5.13 ಲಕ್ಷ ಮೌಲ್ಯದ ವಸ್ತು ಹಾಗೂ ಮಚ್ಚು, ಬಡಿಗೆ, ಕುಡಗೋಲು, ವೈರ್ ಪೈಪ್ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.